ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ೭೫ನೇ ಜನ್ಮ ದಿನಾಚರಣೆಯನ್ನು ಸಿದ್ದರಾಮೋತ್ಸವ ಎಂದು ಆಚರಿಸುವ ಮಾದರಿಯಲ್ಲಿಯೇ, ಶಿವಕುಮಾರೋತ್ಸವವನ್ನೂ ಆಯೋಜಿಸಬೇಕು ಎಂದು ಡಿ.ಕೆ ಶಿವಕುಮಾರ್ ಬೆಂಬಲಿಗರು ಒತ್ತಾಯಿಸಲು ಶುರು ಮಾಡಿದ್ದಾರೆ. ಇದರಿಂದಿಗೆ ಉಭಯ ನಾಯಕರ ಬೆಂಬಲಿಗರ ನಡುವೆ ಪೈಪೋಟಿ ಏರ್ಪಟ್ಟಿದೆ.
ಶಿವಕುಮಾರೋತ್ಸವ -2023 ಕಾರ್ಯಕ್ರಮ ಆಯೋಜಿಸಬೇಕು ಎಂದು ಡಿ.ಕೆ ಶಿವಕುಮಾರ್ ಬೆಂಬಲಿಗ ಜೆ.ಸಿ ರಾಜು ಮನವಿ ಮಾಡಿದ್ದಾರೆ. ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿರುವ ಪಕ್ಷದ ಕಮಿಟಿ ನೇತೃತ್ವದಲ್ಲಿಯೇ ಶಿವಕುಮಾರೋತ್ಸವ ಮಾಡುವಂತೆ ಒತ್ತಾಯಿಸಿದ್ದಾರೆ.
ಜೆ.ಸಿ ರಾಜು ಅವರು ಡಿಕೆಶಿ ಆಪ್ತ ಹಾಗೂ ನಾಗಮಂಗಲ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಡಿಕೆಶಿ ಬೆಂಬಲಿಗರಿಂದ ಸಿದ್ದು ಬೆಂಬಲಿಗರನ್ನು ಇಕ್ಕಟಿಗೆ ಸಿಲುಕಿಸುವ ತಂತ್ರ ಹೆಣೆಯಲಾಗಿದೆ. ಸಿದ್ದರಾಮೋತ್ಸವ ಆಯೋಜನೆ ಮಾಡಿರುವ ಸಿದ್ದು ಬೆಂಬಲಿಗರಿಗೆ ಜೆ.ಸಿ ರಾಜು ಪತ್ರ ತಲೆನೋವಾಗಿ ಪರಿಣಮಿಸಿದೆ.
ಡಿ.ಕೆ ಶಿವಕುಮಾರ್ ಅವರಿಗೆ 60 ವರ್ಷಗಳು ಆಗಿದೆ. ಪಕ್ಷಕ್ಕಾಗಿ ಚಿಕ್ಕ ವಯಸ್ಸಿನಿಂದ ದುಡಿದಿದ್ದಾರೆ. ಅವರ ಪಕ್ಷ ನಿಷ್ಠೆ ನೋಡಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದ್ದರಿಂದ ಶಿವಕುಮಾರೋತ್ಸವ ಕಾರ್ಯಕ್ರಮ ಮಾಡಬೇಕು. ಇಂದಿನ ಸಿದ್ದರಾಮೋತ್ಸವ ಸಿದ್ಧತೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ತೀರ್ಮಾನಿಸಬೇಕು ಎಂದು ಜೆ.ಸಿ ರಾಜು ಮನವಿ ಮಾಡಿದ್ದಾರೆ.