Site icon Vistara News

ಬಾಲಿವುಡ್‌ ನ ಜನ ಮೆಚ್ಚಿದ ಗಾಯಕ ಕೆಕೆ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, 3,000 ಜಿಂಗಲ್ಸ್‌ ಹಾಡಿದ್ದರು!

kk


ನವದೆಹಲಿ: ಕೋಲ್ಕೊತಾದಲ್ಲಿ ಮಂಗಳವಾರ ರಾತ್ರಿ ಕಾನ್‌ಸರ್ಟ್‌ ಮುಗಿಸಿದ ಒಂದು ಗಂಟೆಯೊಳಗೆ ಅಕಾಲಿಕ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್‌ ಕುನ್ನಾಥ್ ಅವರ ಬದುಕು-ಸಾಧನೆ ಕುರಿತ 10 ವಿಶಿಷ್ಟ ಸಂಗತಿಗಳ ವಿವರ ಇಲ್ಲಿದೆ.
ಬಾಲಿವುಡ್‌ನ ಹಿಟ್‌ ಸಿನಿಮಾಗಳಿಗೆ ಕೆಕೆ ಸಂಗೀತ ಸಂಯೋಜನೆ ನೀಡಿದ್ದರು. ಜನ್ನಾತ್‌, ಓಂ ಶಾಂತಿ ಓಂ, ಕೈಟ್ಸ್‌ ಸಿನಿಮಾದಲ್ಲಿ ಹಾಡಿದ್ದರು. ಕೆಕೆ ಅವರು ಈಗ ಇಲ್ಲದಿದ್ದರೂ ಅವರ ದನಿ ಚಿರಸ್ಥಾಯಿ.


1. ಬಾಲಿವುಡ್‌ ಪ್ರವೇಶಕ್ಕೂ ಮುನ್ನ 3,000 ಕ್ಕೂ ಹೆಚ್ಚು ಜಿಂಗಲ್ಸ್‌ಗಳನ್ನು ಹಾಡಿದ್ದರು. 1985ರಲ್ಲಿಯೇ ಜಿಂಗಲ್ಸ್‌ಗಳನ್ನು ಹಾಡಲು ಶುರು ಮಾಡಿದ್ದರು. ಜಿಂಗಲ್ಸ್‌ ಎಂದರೆ ಸಣ್ಣ ಹಾಡು ಅಥವಾ ಟ್ಯೂನ್‌ಗಳಾಗಿವೆ. ಸಾಮಾನ್ಯವಾಗಿ ವಾಣಿಜ್ಯೋದ್ದೇಶಕ್ಕೆ ಬಳಸುತ್ತಾರೆ. ಯಾವುದಾದರೂ ಉತ್ಪನ್ನ ಅಥವಾ ಸೇವೆಯ ಜಾಹೀರಾತುಗಳಲ್ಲಿ ಜಿಂಗಲ್ಸ್‌ ಇರುತ್ತದೆ.

2. ಕೆಕೆ ಅವರ ಬಾಲ್ಯದಲ್ಲಿ ತಾಯಿ ಮಲಯಾಳಿ ಗೀತೆಗಳನ್ನು ರೆಕಾರ್ಡರ್‌ ಮೂಲಕ ಕೇಳಿಸುತ್ತಿದ್ದರು. ಇದು ಬಾಲಕನ ಮೇಲೆ ಪ್ರಭಾವ ಬೀರಿತ್ತು.

3. ಎರಡನೇ ತರಗತಿಯಲ್ಲಿ ಇದ್ದಾಗ ಗಂಭೀರವಾಗಿ ಹಾಡಲು ಆರಂಭ, ವೇದಿಕೆಯ ಮೇಲೆ “ಜಬ್‌ ಅಂಧೇರಾ ಹೋತಾ ಹೈʼ ಹಾಡಿನ ಗಾಯನಕ್ಕೆ ಸೈ ಎನ್ನಿಸಿದ್ದರು.

4. ಬಾಲ್ಯದ ಗೆಳತಿ ಜ್ಯೋತಿ ಕೃಷ್ಣ ಅವರನ್ನು ಕೆಕೆ ವಿವಾಹವಾದರು. ಆರಂಭದ ಒಂದು ಹಂತದಲ್ಲಿ ಗಾಯನ ಬಿಟ್ಟು ಸೇಲ್ಸ್‌ಮ್ಯಾನ್‌ ಆಗಿ 6 ತಿಂಗಳು ಕೆಲಸ ಮಾಡಿದ್ದರು. ಬಳಿಕ ಪತ್ನಿ ಮತ್ತು ತಂದೆಯ ಸಲಹೆ ಮೇರೆಗೆ ಜಿಂಗಲ್ಸ್‌ ಹಾಡುವ ಮೂಲಕ ಮತ್ತೆ ಗಾಯನ ಪ್ರಪಂಚಕ್ಕೆ ಬಂದರು.

5. ಕೆಕೆ ಅವರು ಹಲವಾರು ಪ್ರಸಿದ್ಧ ಬಾಲಿವುಡ್‌ ಗೀತೆಗಳನ್ನು ಹಾಡಿದ್ದರೂ, ಪ್ರಶಸ್ತಿಗಳಿಂದ ದೂರ ಇದ್ದವರು. ೨೦೦೯ರಲ್ಲಿ ಗಾಯನವೊಂದಕ್ಕೆ ಮಹತ್ವದ ಪ್ರಶಸ್ತಿ ಗಳಿಸಿದ್ದರು. ಪ್ರಶಸ್ತಿಗಳಿಗೆ ನಾನು ಲಾಬಿ ಮಾಡುವುದಿಲ್ಲ. ಆದ್ದರಿಂದ ಅವುಗಳು ಸಿಗುವುದಿಲ್ಲ ಎಂದು ಕೆಕೆ ಹೇಳಿದ್ದರು.

6. ಕೆಕೆ ಅವರು ಅತ್ಯಂತ ಪ್ರಸಿದ್ಧ ಹಾಡುಗಳನ್ನು ಹೇಳಿದ್ದರೂ, ಬಹಳಷ್ಟು ಮಂದಿ ತಮ್ಮ ಗೀತೆಗಳನ್ನು ಇನ್ನೂ ಕೇಳಿಲ್ಲ ಎಂದೇ ವಿನಮ್ರತೆ ವ್ಯಕ್ತಪಡಿಸುತ್ತಿದ್ದರು.

7. ಸಂಗೀತ ಪ್ರಪಂಚದಲ್ಲಿ ಎಲೆಮರೆಯ ಕಾಯಿಯಂತೆಯೇ ಕೆಕೆ ಇರುತ್ತಿದ್ದರು. ಅವರ ಸಂಗೀತವನ್ನು ಬಹುವಾಗಿ ಇಷ್ಟಪಡುತ್ತಿದ್ದವರೂ ಹಾಡುಗಾರ ಯಾರು ಎಂದು ಐದು ನಿಮಿಷ ಕೂಡ ಪರಿಶೀಲಿಸುತ್ತಿರಲಿಲ್ಲ.

8. ಕೆಕೆ ಯಾವುದೇ ವೃತ್ತಿಪರ ಸಂಗೀತಜ್ಞರಿಂದ ಶಾಸ್ತ್ರೀಯ ತರಬೇತಿ ಪಡೆದಿರಲಿಲ್ಲ. ಅವರು ಶಾಸ್ತ್ರೀಯ ಸಂಗೀತಗಾರನಾಗಿರಲಿಲ್ಲ. ಆದರೆ ಎಲ್ಲ ಭಾಷೆಗಳಿಗೆ ಅವರ ಧ್ವನಿ ಹೊಂದಿಕೆಯಾಗುತ್ತಿತ್ತು.

9. ಕೆಕೆ ಅವರು ಕಿಶೋರ್‌ ಕುಮಾರ್‌ ಅವರ ಅಪ್ಪಟ ಅಭಿಮಾನಿಯಾಗಿದ್ದರು

10. ದಿಲ್ಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಗಳಿಸಿದ್ದರು.

Exit mobile version