ರಾಯ್‌ಪುರ: ಛತ್ತೀಸ್‌ಗಢದ ಕವಾರ್ಧ ಜಿಲ್ಲೆಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದ್ದು, 18 ಕಾರ್ಮಿಕರು ಮೃತಪಟ್ಟಿದ್ದಾರೆ. ಛತ್ತೀಸ್‌ಗಢದ (Chhattisgarh) ಕವಾರ್ಧ (Kawardha) ಪ್ರದೇಶದಲ್ಲಿ ಸುಮಾರು 25-30 ಕಾರ್ಮಿಕರಿದ್ದ ಪಿಕ್‌ಅಪ್ ವಾಹನವು ತೆರಳುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಾಹ್‌ಪನಿ ಪ್ರದೇಶದ ಕಂದಕಕ್ಕೆ ಉರುಳಿದೆ. 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸೋಮವಾರ (ಮೇ 20) ಬೆಳಗಿನ ಜಾವವೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬೈಗಾ ಬುಡಕಟ್ಟು ಸಮುದಾಯದವರು ಕೆಲಸಕ್ಕೆಂದು ಪಿಕ್‌ಅಪ್ ವಾಹನದಲ್ಲಿ ತೆರಳುತ್ತಿದ್ದರು. ಸುಮಾರು 20 ಅಡಿ ಆಳದ ಕಂದಕಕ್ಕೆ ಬಸ್ ಉರುಳಿದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸುತ್ತಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತಾದರೂ ವಾಹನ ಬಿದ್ದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಹಿಳೆಯರು ಕೂಡ ಇದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಇವರು ಕುಯಿ ಗ್ರಾಮದವರು ಎಂಬ ಮಾಹಿತಿಯೂ ಲಭ್ಯವಾಗಿದೆ.
Chhattisgarh | 15 people died after a pick-up vehicle overturned near the Kawardha area. Eight people have been injured & shifted to the hospital for treatment: Abhishek Pallav, Kawardha SP
— ANI (@ANI) May 20, 2024
ಸಂತಾಪ ಸೂಚಿಸಿದ ಡಿಸಿಎಂ
ಅಪಘಾತ ಸಂಭವಿಸಿ 18 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಸಂತಾಪ ಸೂಚಿಸಿದ್ದಾರೆ. “ಕವಾರ್ಧ ಜಿಲ್ಲೆಯಲ್ಲಿ ಪಿಕ್‌ಅಪ್ ವಾಹನ ಕಂದಕಕ್ಕೆ ಉರುಳಿ 15 ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ನೋವಾಯಿತು. ಕುಟುಂಬಸ್ಥರ ನೋವಿನಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರದಲ್ಲೇ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಡಿಸಿಎಂ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಖಾಸಗಿ ಸಂಸ್ಥೆಯೊಂದರ 12 ಕಾರ್ಮಿಕರು ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು. ದುರ್ಗದ ಗಣಿಯಲ್ಲಿ ಕಾರ್ಮಿಕರಿಂದ ತುಂಬಿದ್ದ ಬಸ್ ಪಲ್ಟಿಯಾಗಿತ್ತು. ಗಾಯಗೊಂಡವರಲ್ಲಿ ಹನ್ನೆರಡು ಜನರನ್ನು ಎಐಐಎಂಎಸ್ (ರಾಯಪುರ) ಗೆ ಸ್ಥಳಾಂತರಿಸಲಾಗಿತ್ತು, ಉಳಿದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಘಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು.
ಇದನ್ನೂ ಓದಿ: Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ