ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮನೆಯ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ (Firing at Salman Khan house) ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಪಂಜಾಬ್ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಗುಂಡಿನ ದಾಳಿ ನಡೆಸಿದವರಿಗೆ ಗನ್ಗಳನ್ನು ನೀಡಿದ್ದರು.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ನಡೆದಿತ್ತು. ಆ ಆರೋಪಿಗಳಿಗೆ ಮಾರ್ಚ್ 15 ರಂದು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಎಂಬಿಬ್ಬರು ಪಿಸ್ತೂಲ್ ಮತ್ತು ಕಾಟ್ರಿಜ್ಗಳನ್ನು ನೀಡಿದ್ದರು. ಈ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದಾರೆ.
ಸಲ್ಮಾನ್ ಖಾನ್‌ನನ್ನು ಕೊಂದೇ ತೀರುತ್ತೇನೆ, ನನ್ನ ಜೀವನದ ಗುರಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿʼʼ ಎಂದು ಉಲ್ಲೇಖಿಸಿದ್ದಾರೆ. ʻʻಸಲ್ಮಾನ್ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂಬುದಾಗಿ ಹೇಳಿದ್ದಾರೆ.
“ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಅವರನ್ನು ಕೊಲ್ಲುತ್ತೇನೆʼʼ ಎಂದು ಬಿಷ್ಣೋಯ್ ಹೇಳಿದ್ದಾರೆ.
ಇದನ್ನೂ ಓದಿ: Gyanvapi Mosque: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶ ನೀಡಿದ್ದ ಜಡ್ಜ್‌ಗೆ ವಿದೇಶದಿಂದ ಜೀವ ಬೆದರಿಕೆ
ʻʻಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ, ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ, ಗಾಯಕ ಮೂಸೆವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ” ಹೇಳಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ, ಕೃಷ್ಣಮೃಗವನ್ನು ಕೊಂದ ಆರೋಪದ ಮೂಲಕ ಸಲ್ಮಾನ್ ತನ್ನ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ.
ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲ. ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ನಾನು ಬೇರೆಯವರನ್ನು ಅವಲಂಬಿಸುವುದಿಲ್ಲ,’’ ಎಂದು ಎಬಿಪಿ ಸುದ್ದಿವಾಹಿನಿಗೆ ತಿಳಿಸಿದರು.
2018 ರಲ್ಲಿ, ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಅವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್ನ ಬಿಷ್ಣೋಯ್ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಇದನ್ನು ಜಾಂಬಾಜಿ ಎಂದೂ ಕರೆಯುತ್ತಾರೆ.