ಮುಂಬಯಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ವಾರ ಸಾಕಷ್ಟು ಏರಿಳಿತಗಳು ನಡೆದಿತ್ತು. (Stock Market) ಮುಂದಿನ ವಾರ ಪ್ರಭಾವ ಬೀರಬಹುದಾದ ಏಳು ಅಂಶಗಳ ಬಗ್ಗೆ ನೋಡೋಣ.
ಅದಾನಿ ಎಂಟರ್‌ಪ್ರೈಸಸ್ ರಿಸಲ್ಟ್ ಫೆ.14ಕ್ಕೆ : ಅದಾನಿ ಗ್ರೂಪ್ ಹಲವಾರು ಭರವಸೆಗಳನ್ನು ಕೊಟ್ಟಿದ್ದರೂ, ಹೂಡಿಕೆದಾರರು ಇನ್ನೂ ಷೇರುಗಳನ್ನು ಖರೀದಿಸಲು ಮುಂದೆ ಬಂದಿಲ್ಲ. ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿ ನಿರ್ಣಾಯಕವಾಗಲಿದೆ. ಕಳೆದ ಶುಕ್ರವಾರ ಸೆಬಿಯು ಅಂಬುಜಾ ಸಿಮೆಂಟ್ಸ್, ಅದಾನಿ ಪೋರ್ಟ್ಸ್ ಷೇರನ್ನು ತನ್ನ ಹೆಚ್ಚುವರಿ ನಿಗಾ ಚೌಕಟ್ಟಿನಡಿಯಿಂದ ಬೇರ್ಪಡಿಸಿ ರಿಲೀಫ್ ಕೊಟ್ಟಿದೆ. ಈ ನಡುವೆ ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್, ಅದಾನಿ ಗ್ರೀನ್ ಎನರ್ಜಿ ಸೇರಿದಂತೆ ಅದಾನಿ ಗ್ರೂಪ್‌ನ 4 ಷೇರುಗಳನ್ನು ತನ್ನ ಮುನ್ನೋಟದಲ್ಲಿ ನೆಗೆಟಿವ್‌ನಿಂದ ಸ್ಟೇಬಲ್‌ಗೆ ಪರಿವರ್ತಿಸಿದೆ. ಮಂಗಳವಾರ ಅದಾನಿ ಎಂಟರ್‌ಪ್ರೈಸಸ್ ತನ್ನ ಹಣಕಾಸು ಫಲಿತಾಂಶವನ್ನು ಪ್ರಕಟಿಸಲಿದೆ.
ಭಾರತದ ಹಣದುಬ್ಬರ ಅಂಕಿ ಅಂಶ ಫೆ.13ಕ್ಕೆ ಪ್ರಕಟ: ಭಾರತದಲ್ಲಿ ಫೆ.13 ಕ್ಕೆ ಮತ್ತು ಅಮೆರಿಕದಲ್ಲಿ ಫೆ. 14 ಕ್ಕೆ ಹಣದುಬ್ಬರದ ಅಂಕಿ ಅಂಶಗಳು ಪ್ರಕಟವಾಗಲಿವೆ. ಇದು ಸ್ಟಾಕ್ ಮಾರ್ಕೆಟ್ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.
ಜಾಗತಿಕ ಮಾರುಕಟ್ಟೆ: ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ವರ್ಷ ಇದುವರೆಗೆ ಚೀನಾ, ಹಾಕಾಂಗ್, ಜಪಾನ್, ದಕ್ಷಿಣ ಕೊರಿಯಾ, ತೈವಾನ್‌ನಲ್ಲಿ ಇದುವರೆಗೆ ಸೂಚ್ಯಂಕಗಳು 5-10% ಏರಿಕೆ ದಾಖಲಿಸಿವೆ. ಭಾರತದಲ್ಲಿ ಇದುವರೆಗೆ ಕೇವಲ 1% ಮಾತ್ರ ಏರಿಕೆಯಾಗಿದೆ.
ಕಾರ್ಪೊರೇಟ್ ಕಂಪನಿಗಳ ರಿಸಲ್ಟ್: ಅದಾನಿ ಎಂಟರ್‌ಪ್ರೈಸಸ್, ಒಎನ್‌ಜಿಸಿ, ಗ್ರಾಸಿಮ್ ಇಂಡಸ್ಟ್ರೀಸ್, ಅಪೊಲೊ ಹಾಸ್ಪಿಟಲ್ಸ್, ಇಂಡಿಯನ್ ರೈಲ್ವೇಸ್ ಫೈನಾನ್ಸ್ ಕಾರ್ಪ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್, ಎನ್‌ಎಂಡಿಸಿ, ಬಯೊಕಾನ್‌ನ ಹಣಕಾಸು ಫಲಿತಾಂಶ ಮುಂದಿನ ವಾರ ಪ್ರಕಟವಾಗಲಿದೆ.
ವಿದೇಶಿ ಹೂಡಿಕೆಯ ಹೊರ ಹರಿವು: ಈ ವರ್ಷ ಆರಂಭದಿಂದಲೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಪೇಟೆಯಿಂದ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಜನವರಿಯಲ್ಲಿ 6,000 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ. ಇದು ಕಳೆದ ಐದು ತಿಂಗಳಲ್ಲಿಯೇ ಗರಿಷ್ಠ ಮಟ್ಟವಾಗಿದೆ.