Site icon Vistara News

Bulldozer justice : ಅಸ್ಸಾಂ ಸರ್ಕಾರಕ್ಕೆ ತಿರುಗುಬಾಣವಾದ ಬುಲ್ದೋಜರ್ ನ್ಯಾಯ! ನೆಲಸಮಗೊಳಿಸಿದ ಮನೆ ಮಾಲೀಕರಿಗೆ 30 ಲಕ್ಷ ಪರಿಹಾರ!

bulldozer justice

ಗುವಾಹಟಿ: ಅಸ್ಸಾಂ ನಾಗಾಂವ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಎರಡು ವರ್ಷಗಳ ಹಿಂದೆ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿದ ಐದು ಕುಟುಂಬಗಳಿಗೆ ಅಸ್ಸಾಂ ಸರ್ಕಾರ 30 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತಾಗಿದೆ. ಈ ಮೂಲಕ ಉತ್ತರ ಪ್ರದೇಶದ ಸಿಎಂ ಅವರ ‘ಬುಲ್ಡೋಜರ್​ ನ್ಯಾಯ’ (Bulldozer justice) ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರಕ್ಕೆ ತಿರುಗುಬಾಣವಾಗಿದೆ. ಅದೇ ರೀತಿ ಸ್ಥಳೀಯನಿವಾಸಿಗಳಾದ ಸಫಿಕುಲ್ ಇಸ್ಲಾಂ ಅವರ ಕುಟುಂಬಕ್ಕೆ ಸರ್ಕಾರ 2.5 ಲಕ್ಷ ರೂ.ಗಳ ಪರಿಹಾರ ನೀಡುವಂತಾಗಿದೆ. ಇದಕ್ಕೆಲ್ಲ ಕಾರಣ ಹೈಕೋರ್ಟ್ ಆದೇಶ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೋರ್ಟ್​​ ಪರಿಹಾರ ನೀಡುವಂತೆ ಪೊಲೀಸರಿಗೆ ತಾಕೀತು ಮಾಡಿತ್ತು.

ಮೇ 21, 2022 ರಂದು, ನಾಗಾವ್ ಜಿಲ್ಲೆಯ ಸಲೋನಬರಿ ಗ್ರಾಮದ ಗುಂಪೊಂದು ಮೀನು ಮಾರಾಟಗಾರ ಇಸ್ಲಾಂ ಅವರ ಸಾವಿನ ನಂತರ ಬಟದ್ರವಾ ಪೊಲೀಸ್ ಠಾಣೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿತ್ತು ಎನ್ನಲಾಗಿದೆ. ಮರುದಿನವೇ, ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಐದು ಕುಟುಂಬಗಳ ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದರು. ನೆಲಸಮಗೊಂಡ ಮನೆಗಳು “ಅಕ್ರಮವಾಗಿ ಅಥವಾ ನಕಲಿ ದಾಖಲೆಗಳೊಂದಿಗೆ” ಅಲ್ಲಿ ನೆಲೆಸಿದ ಜನರಿಗೆ ಸೇರಿದ್ದು ಎಂದು ಪೊಲೀಸರು ಆರೋಪಿಸಿದ್ದರು.

ಕಳೆದ ವರ್ಷ ನೆಲಸಮಗೊಳಿಸುವ ಕ್ರಮದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದ ಆಗಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್ ಎಂ ಛಾಯಾ ನೇತೃತ್ವದ ವಿಭಾಗೀಯ ಪೀಠವು “ಕಾನೂನುಬಾಹಿರ ಕ್ರಮ” ದಿಂದ ಬಾಧಿತರಾದ ಜನರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ಹೇಳಿತ್ತು. ತನಿಖೆಯ ಸೋಗಿನಲ್ಲಿ ಪೊಲೀಸರು ಅನುಮತಿಯಿಲ್ಲದೆ ಯಾರ ಮನೆಯನ್ನೂ ನೆಲಸಮ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲ ಹೇಳಿತ್ತು. ಅಲ್ಲದೆ ಅಂದಿನ ಪೊಲೀಸ್ ಅಧೀಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಸರ್ಕಾರಕ್ಕೆ ಮನವಿ

ಈ ವರ್ಷದ ಏಪ್ರಿಲ್ 24 ರಂದು, ಪೊಲೀಸ್ ಇನ್​ಸ್ಪೆಕ್ಟರ್​​ ಜನರಲ್ (ಆಡಳಿತ) ಪರಿಹಾರ ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಗೃಹ ಮತ್ತು ರಾಜಕೀಯ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಸಲ್ಲಿಸಿದರು. ಪ್ರತಿ ಪಕ್ಕಾ ಮನೆಗೆ 10 ಲಕ್ಷ ರೂ ಮತ್ತು ನೆಲಸಮಗೊಂಡ ಪ್ರತಿ ಕಚ್ಚಾ ಮನೆಗೆ 2.5 ಲಕ್ಷ ರೂ. ಪರಿಹಾರ ಕೊಡಬೇಕೆಂದು ಕೋರಿತ್ತು. ಹೀಗೆ ಎರಡು ಪಕ್ಕಾ ಮನೆಗಳು ಮತ್ತು ನಾಲ್ಕು ಕಚ್ಚಾ ಮನೆಗಳ ಮಾಲೀಕರಿಗೆ ಪರಿಹಾರ ನೀಡಲಾಗಿದೆ.

ಇದನ್ನೂ ಓದಿ: Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ಸಂತ್ರಸ್ತರ ಮನೆಗಳನ್ನು ಅಕ್ರಮವಾಗಿ ನೆಲಸಮಗೊಳಿಸಲು ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆಯೂ ನ್ಯಾಯಾಲಯ ಮಾಹಿತಿ ಕೇಳಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಸರ್ಕಾರಿ ವಕೀಲ ನಾಥ್ ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರಗಳಿಗೆ ಹುಡುಕಾಟ ಎಂದ ಪೊಲೀಸರು

ಘಟನೆ ಕುರಿತ ರಿಟ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಪ್ರಸ್ತುತ ನಾಗಾವ್ ಎಸ್ಪಿ ಬುಧವಾರ ಅಫಿಡವಿಟ್ ಸಲ್ಲಿಸಿದ್ದಾರೆ. ಈ ನೆಲಸಮಗಳು ಮರೆಮಾಚಲಾದ “ಶಸ್ತ್ರಾಸ್ತ್ರಗಳು” ಮತ್ತು “ಮಾದಕವಸ್ತುಗಳ” ಶೋಧ ಕಾರ್ಯಾಚರಣೆ ಭಾಗವಾಗಿತ್ತು ಎಂದು ಹೇಳಿದ್ದಾರೆ.

ಕಾಲಿಯಾಬೋರ್ ಉಪವಿಭಾಗದ ಪೊಲೀಸ್ ಅಧಿಕಾರಿ ನೇತೃತ್ವದ ಶೋಧ ಕಾರ್ಯಾಚರಣೆಯ ವೇಳೆ ಸಹಕಾರದ ಕೊರತೆಯಿಂದಾಗಿ ಆರಂಭಿಕ ಶೋಧದ ನಂತರ ಆರೋಪಿಗಳ ಮನೆಗಳಲ್ಲಿ ಯಾವುದೇ ನಿಷೇಧಿತ ವಸ್ತುಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಅಸ್ಸಾಂ ಸರ್ಕಾರದ ವಕೀಲರು ಬುಧವಾರ ಗುವಾಹಟಿ ಹೈಕೋರ್ಟ್​ಗೆ ಪರಿಹಾರದ ಕುರಿತು ವಿವರಗಳನ್ನು ಸಲ್ಲಿಸಿದರು. ನಾಗಾವ್ ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ಇತರ ಐದು ಕುಟುಂಬಗಳಿಗೆ ಪರಿಹಾರ ಪಾವತಿ ಮಾಡಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

Exit mobile version