ಗಾಂಧಿನಗರ: ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಕುಸಿತದ (Morbi Bridge Collapse) ಕುರಿತು ಜನರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ಸಂಸ್ಥೆಗೆ (SIT) ವಹಿಸಲಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಮೋದಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಕುರಿತು ಇದುವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮೋದಿ ಅವರು ಸೋಮವಾರ ನಡೆಯಬೇಕಿದ್ದ ರೋಡ್ ಶೋ ಒಂದನ್ನು ರದ್ದುಗೊಳಿಸಲಾಗಿದೆ. ಹಾಗಾಗಿ, ಮೋದಿ ಅವರು ಸೋಮವಾರ ಮೊರ್ಬಿಗೆ ತೆರಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 25 ಮಕ್ಕಳು ಸೇರಿ ಸಾವಿನ ಸಂಖ್ಯೆ 91ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇವೆ.
ರಕ್ಷಣಾ ಕಾರ್ಯಾಚರಣೆಗೆ ಅಡಚಣೆ
ಮೊರ್ಬಿಯ ಮಚ್ಚು ನದಿ ತೀರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF)ಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೂ, ರಾತ್ರಿಯಾದ ಕಾರಣ ಕ್ಷಿಪ್ರವಾಗಿ ಜನರನ್ನು ರಕ್ಷಣೆ ಮಾಡಲು ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಅಧಿಕಾರಿಗಳನ್ನೂ ರಕ್ಷಣೆಗಾಗಿ ನಿಯೋಜಿಸಲಾಗಿದೆ.
ಗಣ್ಯರಿಂದ ಸಂತಾಪ
ಮೊರ್ಬಿ ಸೇತುವೆ ದುರಂತದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿ ನೂರಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಸೇತುವೆ ಕುಸಿಯುವ ಮುನ್ನ ಅದರ ಮೇಲೆ ಸುಮಾರು 500 ಜನರಿದ್ದ ಕಾರಣ ಇನ್ನೂ ನೂರಾರು ಜನರ ರಕ್ಷಣೆ ಬಾಕಿ ಇದೆ.
ಇದನ್ನೂ ಓದಿ | Morbi Bridge Collapse | ಸೇತುವೆ ಕುಸಿತದಲ್ಲಿ ಮೃತರ ಸಂಖ್ಯೆ 60ಕ್ಕೆ, 143 ವರ್ಷದ ಸೇತುವೆ ಕುಸಿಯಲು ಕಾರಣವೇನು?