Site icon Vistara News

IPL 2024 : ಆರ್​ಸಿಬಿಗೆ ಸೋಲು ನಂಬರ್​ 6, ಎಸ್​ಆರ್​ಎಚ್ ಕೈಯಲ್ಲಿ ಚಚ್ಚಿಸಿಕೊಂಡ ರೆಡ್​ ಆರ್ಮಿ

IPL 2024

ಬೆಂಗಳೂರು: ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ ಉದ್ಧಾರವಾಗುವ ಯಾವುದೇ ಲಕ್ಷಣಗಳು ಇಲ್ಲ. ಐಪಿಎಲ್​ 2024ರಲ್ಲಿ (IPL 2024) ಸತತವಾಗಿ ಐದನೇ ಸೋಲಿಗೆ ಒಳಗಾಗಿದೆ. ಒಟ್ಟು ಆರನೇ ಸೋಲು. ಏಕೈಕ ಗೆಲುವು ಹಾಗೂ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ! ಈ ಬಾರಿಯಂತೂ ಸನ್​ ರೈಸರ್ಸ್​ ಹೈದರಾಬಾದ್ ತಂಡದ ಬ್ಯಾಟರ್​ಗಳ ಕೈಯಲ್ಲಿ ಚೆನ್ನಾಗಿ ಚಚ್ಚಿಸಿಕೊಂಡು 25 ರನ್​ಗಳಿಂದ ಸೋತಿದೆ. ಈ ಮೂಲಕ ಆರ್​ಸಿಬಿ ಮ್ಯಾನೇಜ್ಮೆಂಟ್​ನ ಬೌಲರ್​ಗಳ ಆಯ್ಕೆಯ ಕಳಪೆ ನಿರ್ಧಾರಗಳು ಬಟಾಬಯಲಾಗಿದೆ. ಆರ್​ಸಿಬಿಯ ಹೊಸ ಅಧ್ಯಾಯ ಇನ್ನಷ್ಟು ಕರಾಳವಾಗಿದೆ. ಇದೇ ವೇಳೆ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಭಯಂಕರ ಸಾಧನೆ ಮಾಡಿದ ಪ್ಯಾಟ್​ ಕಮಿನ್ಸ್​ ನೇತೃತ್ವದ ಹೈದರಾಬಾದ್​ ತಂಡ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದೆ. 39 ಎಸೆತಗಳಲ್ಲಿ ಶತಕ ಬಾರಿಸಿದ ಟ್ರಾವಿಸ್ ಹೆಡ್ ಹಾಗೂ ಆರ್​ಸಿಬಿಯ 3 ವಿಕೆಟ್​ ಉರುಳಿಸಿದ ನಾಯಕ ಪ್ಯಾಟ್​ ಕಮಿನ್ಸ್​ ಗೆಲುವಿನ ರೂವಾರಿಗಳೆನಿಸಿಕೊಂಡರು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 262 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಆರ್​ಸಿಬಿ ಪರ ಒನ್​ ಮ್ಯಾನ್ ಆರ್ಮಿ ರೀತಿ ಹೋರಾಟ ಸಂಘಟಿಸಿದ ವಿಕೆಟ್​ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್​ 35 ಎಸೆತಗಳಲ್ಲಿ 83 ರನ್ ಬಾರಿಸಿದರು. ಆದರೆ, ಉಳಿದವರ ಅಸಮರ್ಥತೆಯಿಂದಾಗಿ ಆರ್​ಸಿಬಿ ಸೋತಿತು.

ಮತ್ತೆ ಬ್ಯಾಟಿಂಗ್ ಫೇಲ್​

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಆರ್​ಸಿಬಿ ಪೂರಕವಾಗಿಯೇ ಆಡಿತು. ಚೇಸಿಂಗ್​ಗೆ ಪೂರಕವಾಗಿದ್ದ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ (20 ಎಸೆತಕ್ಕೆ 40 ರನ್​), ಫಾಫ್​ ಡು ಪ್ಲೆಸಿಸ್​​ (28 ಎಸೆತಕ್ಕೆ 62 ರನ್​) ಉತ್ತಮ ಆರಂಭ ತಂದುಕೊಟ್ಟರು. ಇವರು ಮೊದಲ ವಿಕೆಟ್​ಗೆ 80 ರನ್ ಪೇರಿಸಿದರು. ಆ ಬಳಿಕ ಆರ್​ಸಿಬಿ ತಂಡದ ಪತನ ಶುರುವಾಯಿತು. ವಿಲ್​ ಜಾಕ್ಸ್​ 7 ರನ್ ಬಾರಿಸಿದರೆ, ರಜತ್ ಪಾಟೀದಾರ್​ ಮತ್ತೊಮ್ಮೆ ವೈಫಲ್ಯ ಎದುರಿಸಿ 9 ರನ್​ಗೆ ನಿರ್ಗಮಿಸಿದರು. ಮೊದಲ ಬಾರಿಗೆ ಆರ್​ಸಿಬಿಯ ಆಡುವ ಬಳಗ ಸೇರಿದ್ದ ಸೌರವ್​ ಚೌಹಾಣ್​ ಶೂನ್ಯಕ್ಕೆ ನಿರ್ಗಮಿಸಿದರು.

ದಿನೇಶ್ ಕಾರ್ತಿಕ್ ಅಬ್ಬರ

122 ರನ್​ಗೆ 5 ವಿಕೆಟ್​ ಕಳೆದುಕೊಂಡ ಆರ್​ಸಿಬಿ ಮತ್ತೊಂದು ಬಾರಿ ದೊಡ್ಡ ರನ್​ಗಳ ಅಂತರದಿಂದ ಸೋಲುವ ಸೂಚನೆ ಪಡೆಯಿತು. ಆದರೆ, ಈ ವೇಳೆ ಬ್ಯಾಟ್ ಮಾಡಲು ಬಂದ ದಿನೇಶ್ ಕಾರ್ತಿಕ್​ ಬೆಂಗಳೂರಿನ ಸ್ಟೇಡಿಯಮ್​ ಸುತ್ತಲೂ ಅಬ್ಬರಿಸಿದರು. ಕೇವಲ 35 ಎಸೆತ ಎದುರಿಸಿದ ಅವರು 7 ಸಿಕ್ಸರ್ ಹಾಗೂ 5 ಬೌಂಡರಿ ಸಮೇತ 83 ರನ್ ಬಾರಿಸಿದರು. ಅವರ ಬ್ಯಾಟಿಂಗ್​ನಿಂದಾಗಿ ಆರ್​​ಸಿಬಿಗೆ 200 ರನ್​ಗಳ ಗಡಿ ದಾಟಲು ಸಾಧ್ಯವಾಯಿತು. ಕೊನೆಯಲ್ಲಿ ಮಹಿಪಾಲ್ ಲಾಮ್ರೋರ್ 19 ರನ್ ಬಾರಿಸಿದರೆ ಅನುಜ್ ರಾವತ್​ 25 ರನ್​ ಮಾಡಿದರು. ಇವರ ಆಟದಿಂದಾಗಿ ಆರ್​​ಸಿಬಿಯ ಮರ್ಯಾದೆ ಉಳಿಯಿತು.

ದಾಖಲೆಯ ಸ್ಕೋರ್ ಬಾರಿಸಿದ ಎಸ್​ಆರ್​​ಎಚ್​

ಮೊದಲು ಬ್ಯಾಟ್ ಮಾಡಿದ ಎಸ್​ಆರ್​​ಎಚ್​ ತಂಡ ದಾಖಲೆಯ ಸ್ಕೋರ್ ಪೇರಿಸಿತು. ಎಂದಿಂತೆ ಅಭಿಷೇಕ್​ ಶರ್ಮಾ (22 ಎಸೆತ, 34 ರನ್​) ಜತೆಗೂಡಿದ ಟ್ರಾವಿಸ್ ಹೆಡ್​ (41 ಎಸೆತ, 102 ರನ್​,9 ಪೋರ್​, 8 ಸಿಕ್ಸರ್​) ಮೊದಲ ವಿಕೆಟ್​ಗೆ 108 ರನ್ ಕಲೆ ಹಾಕಿದರು. ಅದರಲ್ಲೂ ಟ್ರಾವಿಡ್​ ಹೆಡ್​ 39 ಎಸೆತಕ್ಕೆ ಶತಕ ಪೂರೈಸಿದರು. ಇದು ಐಪಿಎಲ್​ ಇತಿಹಾಸದಲ್ಲಿ ನಾಲ್ಕನೇ ಅತಿ ವೇಗದ ಶತಕ. ಆ ಬಳಿಕ ಬಂದ ಹೆನ್ರಿಚ್ ಕ್ಲಾಸೆನ್ 31 ಎಸೆತಕ್ಕೆ 67 ರನ್ ಬಾರಿಸಿದರು. ಏಡೆನ್​ ಮಾರ್ಕ್ರಮ್​ 17 ಎಸೆತಕ್ಕೆ 32 ರನ್ ಕೊಡುಗೆ ಕೊಟ್ಟರು. ಅಂತಿಮವಾಗಿ ಕಣಕ್ಕೆ ಇಳಿದ ಅಬ್ದುಲ್​ ಸಮದ್ ಕೇವಲ 10 ಎಸೆತದಲ್ಲಿ 37 ರನ್​ ಬಾರಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟರು. ಆರ್​ಸಿಬಿ ಬೌಲರ್​ಗಳೆಲ್ಲರೂ 10ಕ್ಕಿಂತ ಮೇಲಿನ ಸರಾಸರಿಯಲ್ಲಿ ರನ್​ ಬಿಟ್ಟುಕೊಟ್ಟರು.

Exit mobile version