Site icon Vistara News

ICC Team of the Tournament : ಐಸಿಸಿ ಟೀಮ್​ ಆಫ್​​ ದಿ ಟೂರ್ನಮೆಂಟ್​ನಲ್ಲಿ ಆರು ಭಾರತೀಯರು​; ಕೊಹ್ಲಿಗಿಲ್ಲ ಚಾನ್ಸ್​

ICC Team of the Tournament

ಬೆಂಗಳೂರು: ಜೂನ್ 29 ರಂದು ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದ ಐಸಿಸಿ ಟಿ20 ವಿಶ್ವ ಕಪ್​ 2024ರ (ICC T20 World Cup 2024) ಫೈನಲ್​ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟ್ರೋಫಿ ಗೆದ್ದಿತು. ಅಲ್ಲಿಗೆ ದೊಡ್ಡ ಅಧ್ಯಾಯವೊಂದು ಮುಗಿಯಿತು. ಇಡೀ ಟೂರ್ನಿಯಲ್ಲಿ ರೋಚಕ ಪಂದ್ಯಗಳು ಮತ್ತು ಅತ್ಯುತ್ತಮ ಪ್ರದರ್ಶನಗಳನ್ನು ಕಂಡವು. ಅವೆಲ್ಲವನ್ನೂ ಪರಿಗಣಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ , ಫೈನಲ್ ಪಂದ್ಯದ ನಂತರ ಟೀಮ್ ಆಫ್​ ದಿ ಟೂರ್ನಮೆಂಟ್​ (ICC Team of the Tournament- ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರ ತಂಡ) ಪ್ರಕಟಿಸಿದೆ. ಇದರಲ್ಲಿ 6 ಭಾರತೀಯ ಆಟಗಾರರು ಅವಕಾಶ ಪಡೆದಿದ್ದಾರೆ. ಆದರೆ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿಗೆ ಚಾನ್ಸ್ ಸಿಕ್ಕಿಲ್ಲ.

ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಬಗ್ಗು ಬಡಿದಿತ್ತು. ಇದರೊಂದಿಗೆ ಎಂ.ಎಸ್.ಧೋನಿ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನಾ ಆವೃತ್ತಿಯಲ್ಲಿ ಧೋನಿನೇತೃತ್ವದಲ್ಲಿ ಭಾರತ ಟ್ರೋಫಿ ಗೆದ್ದಿತ್ತು. ಹಾಗೆಯ ಐಸಿಸಿ ಟೀಮ್ ಆಫ್​ ದಿ ಟೂರ್ನಮೆಂಟ್​​ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಭಾರತ ತಂಡದ ಆರು ಆಟಗಾರರು ಇದ್ದಾರೆ. ಆದರೆ, ರನ್ನರ್ ಅಪ್ ಸ್ಥಾನ ಪಡೆದರೂ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರರ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿಲ್ಲ

ಸೆಮಿಫೈನಲ್ ತಲುಪಿದ ನಂತರ ಅಫ್ಘಾನಿಸ್ತಾನದ ಮೂವರು ಆಟಗಾರರು 11ರ ಬಳಗದಲ್ಲಿರುವುದು ವಿಶೇಷ. ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬ ಆಟಗಾರ ಸ್ಥಾನ ಕಂಡುಕೊಂಡಿದ್ದಾರೆ. ಆಯ್ಕೆ ಸಮಿತಿಯಲ್ಲಿ ವೀಕ್ಷಕವಿವರಣೆಗಾರರಾದ ಹರ್ಷ ಭೋಗ್ಲೆ, ಇಯಾನ್ ಬಿಷಪ್, ಕಾಸ್ ನೈದೂ ಮತ್ತು ಐಸಿಸಿ ಕ್ರಿಕೆಟ್ ಜನರಲ್ ಮ್ಯಾನೇಜರ್ ವಾಸಿಮ್ ಖಾನ್ ಇದ್ದರು.

ರೋಹಿತ್ ಶರ್ಮಾ ತಂಡದ ನಾಯಕ

ಭಾರತವನ್ನು ಪ್ರಶಸ್ತಿಗೆ ಮುನ್ನಡೆಸಿದ ನಂತರ ರೋಹಿತ್ ಶರ್ಮಾ ಐಸಿಸಿ ಟೀಮ್ ಆಫ್​ ದಿ ಟೂರ್ನಮೆಂಟ್​ಗೂ ನಾಯಕ. ರೋಹಿತ್ 8 ಇನ್ನಿಂಗ್ಸ್​ಗಳಲ್ಲಿ 257 ರನ್ ಗಳಿಸಿ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು. 281 ರನ್ ಗಳಿಸಿರುವ ರಹಮಾನುಲ್ಲಾ ಗುರ್ಬಾಜ್ ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ಪಂದ್ಯಾವಳಿಯಲ್ಲಿ ರೋಹಿತ್ ಅವರಿಗಿಂತ ಮುಂದಿದ್ದರು. ಅವರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ವಿಂಡೀಸ್​ನ ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಇದ್ದಾರೆ. ಪೂರನ್ ಅಫ್ಘಾನಿಸ್ತಾನ ವಿರುದ್ಧ 53 ಎಸೆತಗಳಲ್ಲಿ 98 ರನ್ ಸೇರಿದಂತೆ 38 ಸರಾಸರಿಯಲ್ಲಿ 228 ರನ್ ಗಳಿಸಿದ್ದರು. ಸ್ಟೋಯ್ನಿಸ್ 40 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 169 ರನ್ ಗಳಿಸಿದ್ದಾರೆ. ಅವರು 160 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಸ್ಪರ್ಧೆಯ ಸಮಯದಲ್ಲಿ ಅವರು ಬೌಲಿಂಗ್​ನಲ್ಲಿ 10 ವಿಕೆಟ್ ಗಳನ್ನು ಪಡೆದಿದ್ದಾರೆ.

ಯುಎಸ್ಎ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್​ನಲ್ಲಿ ಕೊಡುಗೆ ನೀಡಿದರು. ವಿಶ್ವಕಪ್ ಫೈನಲ್​​ನ ಅಂತಿಮ ಓವರ್​ನಲ್ಲಿ ಸೂರ್ಯಕುಮಾರ್ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಪಡೆದು ಮಿಂಚಿದ್ದಾರೆ. ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಈ ತಂಡದಲ್ಲಿದ್ದಾರೆ.

ಇದನ್ನೂ ಓದಿ: Dinesh Karthik : ಆರ್​​ಸಿಬಿ ಬ್ಯಾಟಿಂಗ್ ಕೋಚ್​, ಮಾರ್ಗದರ್ಶಕರಾಗಿ ದಿನೇಶ್​ ಕಾರ್ತಿಕ್ ನೇಮಕ

ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಬೌಲಿಂಗ್ ಆಲ್ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ದಾಳಿಯಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್ ಮತ್ತು ಫಜಲ್ಹಾಕ್ ಫಾರೂಕಿ ಇದ್ದಾರೆ. ಟೂರ್ನಿಯಲ್ಲಿ 15 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ 12ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ತಂಡ ಈ ರೀತಿ ಇದೆ

ರೋಹಿತ್ ಶರ್ಮಾ (ನಾಯಕ- ಭಾರತ), ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ), ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್), ಸೂರ್ಯಕುಮಾರ್ ಯಾದವ್ (ಭಾರತ), ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ), ಹಾರ್ದಿಕ್ ಪಾಂಡ್ಯ (ಭಾರತ), ಅಕ್ಷರ್ ಪಟೇಲ್ (ಭಾರತ), ರಶೀದ್ ಖಾನ್ (ಅಫ್ಘಾನಿಸ್ತಾನ), ಜಸ್ಪ್ರೀತ್ ಬುಮ್ರಾ (ಭಾರತ), ಅರ್ಷ್ದೀಪ್ ಸಿಂಘಾ (ಭಾರತ), ಫಜಲ್ಹಾಕ್ ಫಾರೂಕಿ (ಅಫ್ಘಾನಿಸ್ತಾನ).

Exit mobile version