ಗಾಂಧಿನಗರ: ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿರುವ ತೂಗುಸೇತುವೆ (Morbi Bridge Collapse) ಕುಸಿತವುಂಟಾಗಿದೆ. ನೂರಾರು ಜನ ಗಾಯಗೊಂಡಿದ್ದು, ಮೃತಪಟ್ಟವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಸೇತುವೆ ದುರಸ್ತಿಯಾದ ಐದು ದಿನದಲ್ಲೇ ಕುಸಿದಿರುವುದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಸೇತುವೆ ಮೇಲೆ ಹೆಚ್ಚಿನ ಜನ ಸೇರಿದ್ದೇ ಕುಸಿತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಮಚ್ಚು ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಮೇಲೆ 150 ಜನ ಏಕಕಾಲಕ್ಕೆ ತೆರಳಬಹುದು ಅಥವಾ ನಿಲ್ಲಬಹುದು ಎಂದು ದುರಸ್ತಿ ಬಳಿಕ ಅಧಿಕಾರಿಗಳು ತಿಳಿಸಿದ್ದರು. ಆದರೆ, ಸೇತುವೆ ವೀಕ್ಷಣೆಗೆ ಹೆಚ್ಚಿನ ಆಗಮಿಸಿದ ಕಾರಣ ಸುಮಾರು 500 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಹೀಗೆ ಟಿಕೆಟ್ ಪಡೆದ 600ಕ್ಕೂ ಹೆಚ್ಚು ಜನ ಸೇತುವೆ ಮೇಲೆ ನಿಂತಿದ್ದ ಕಾರಣ ಅತಿಯಾದ ಭಾರ ತಾಳದೆ ಸೇತುವೆ ಕುಸಿದಿದೆ ಎಂದು ವರದಿಗಳು ತಿಳಿಸಿವೆ.
ಸರ್ಕಾರದ ಅನುಮತಿಯನ್ನೇ ಪಡೆದಿಲ್ಲ
ಒರೆವಾ ಗ್ರೂಪ್ ಎಂಬ ಕಂಪನಿಯು ಮೊರ್ಬಿ ಸೇತುವೆಯನ್ನು ದುರಸ್ತಿ ಮಾಡುವ ಟೆಂಡರ್ ಪಡೆದಿದ್ದು, ಏಳು ತಿಂಗಳು ದುರಸ್ತಿ ಕಾಮಗಾರಿ ಕೈಗೊಂಡಿದೆ. ಆದರೆ, ಅಕ್ಟೋಬರ್ 26ರಂದು ಸೇತುವೆ ಮರು ಆರಂಭಕ್ಕೂ ಮುನ್ನ ಸ್ಥಳೀಯ ಆಡಳಿತದಿಂದ ಕಂಪನಿಯು ಫಿಟ್‌ನೆಸ್ ಸರ್ಟಿಫಿಕೇಟ್ ಆಗಲಿ, ಕ್ವಾಲಿಟಿ ಚೆಕ್ ಆಗಲಿ, ಜನರ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಅನುಮತಿಯನ್ನಾಗಲಿ ಪಡೆದಿಲ್ಲ. ಹೀಗೆ, ಅನುಮತಿಯನ್ನೇ ಪಡೆಯದೆ, ಹೆಚ್ಚಿನ ಜನರ ಸಂಚಾರಕ್ಕೆ ಅನುಮತಿ ನೀಡಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಭೂಪೇಂದ್ರ ಸಿಂಗ್
ಮೊರ್ಬೆ ಜಿಲ್ಲೆಯಲ್ಲಿ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸೇತುವೆ ಬಿದ್ದಿರುವ ರೀತಿ, ಜನರ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದ ಅವರು ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ವಾಯುಪಡೆ, ನೌಕಾಪಡೆಯ ಸಿಬ್ಬಂದಿಯನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ.
ಇದನ್ನೂ ಓದಿ | Morbi Bridge Collapse | ಸೇತುವೆ ಕುಸಿತ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ, ಮೋದಿ ಕಾರ್ಯಕ್ರಮ ರದ್ದು, ಸಾವಿನ ಸಂಖ್ಯೆ 91