ನವದೆಹಲಿ: 293 ಪ್ರಯಾಣಿಕರ ಸಾವಿಗೆ ಕಾರಣಾಗಿದ್ದ ಒಡಿಶಾ ರೈಲು ಅಪಘಾತ (Odisha Train Accident) ಸಂಬಂಧ ಭಾರತೀಯ ರೈಲ್ವೆ ಇಲಾಖೆಯ (Indian Railway) ಒಟ್ಟು 7 ಸಿಬ್ಬಂದಿಯನ್ನು (7 Railway Employees Suspended) ಅಮಾನತು ಮಾಡಿದೆ. ಕರ್ತವ್ಯ ನಿರತರಾಗಿದ್ದ ಸ್ಟೇಷನ್ ಮಾಸ್ಟರ್, ಟ್ರಾಫಿಕ್ ಇನ್ಸ್ಪೆಕ್ಟರ್, ಟೆಕ್ನಿಷಿಯನ್ ಹಾಗೂ ಈಗಾಗಲೇ ಸಿಬಿಐ (CBI) ಬಂಧಿಸಿರುವ ಮೂವರ ಸೇರಿ ಒಟ್ಟು 7 ಸಿಬ್ಬಂದಿಯನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.
ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಎಚ್ಚರಿಕೆ ವಹಿಸಿದ್ದರೆ ಅಪಘಾತವನ್ನು ತಪ್ಪಿಸಬಹುದಿತ್ತು. ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಮೂವರು ಸೇರಿದಂತೆ ಏಳು ಮಂದಿ ನೌಕರರನ್ನು ರೈಲ್ವೆ ಇಲಾಖೆಯು ಅಮಾನತುಗೊಳಿಸಿದೆ. ನಿಯಮಗಳ ಪ್ರಕಾರ 24 ಗಂಟೆಗಳ ಕಾಲ ಬಂಧಿಸಲಾದ ಉದ್ಯೋಗಿಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ಆಗ್ನೇಯ ರೈಲ್ವೆಯ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜೂನ್ 2ರಂದು ಒಡಿಶಾ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 293 ಪ್ರಯಾಣಿಕರು ಮೃತಪಟ್ಟು, 1200ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಬಾಲಸೋರ್ ಜಿಲ್ಲೆಯ ಬಹನಾಗ್ ಜಝಾರ್ ರೈಲು ನಿಲ್ದಾಣ ಸಮೀಪ ಈ ಭೀಕರ ರೈಲು ಅಪಘಾತ ಸಂಭವಿಸಿತ್ತು.
ಈಗಾಗಲೇ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸಿಬಿಐ, ಸೀನಿಯರ್ ಸೆಕ್ಷನ್ ಮ್ಯಾನೇಜರ್ (ಸಿಗ್ನಲ್) ಅರುಣ್ ಕುಮಾರ್ ಮಹಂತಾ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಆಮೀರ್ ಖಾನ್, ಟೆಕ್ನಿಷಿಯನ್ ಪಪ್ಪು ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ಮೂವರು ಸಿಗ್ನಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರನ್ನು ಬಾಲಸೋರ್ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು. ಸಿಬಿಐ ಈ ಪ್ರಕರಣವನ್ನು ಜೂನ್ 6ರಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಅಂದಿನಿಂದ ಸುಮಾರು ಬಾರಿ ಅವರನ್ನು ವಿಚಾರಣೆಗೊಳಪಡಿಸಿದೆ.
ಈ ಸುದ್ದಿಯನ್ನೂ ಓದಿ: Odisha Train Tragedy: ಮೂವರು ರೈಲು ಸಿಬ್ಬಂದಿಯನ್ನು ಬಂಧಿಸಿದ ಸಿಬಿಐ! ಅಪಘಾತದ ಬಗ್ಗೆ ಮೊದ್ಲೆ ಗೊತ್ತಿತ್ತಾ?
ಈ ಹಿಂದೆ, ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್ಎಸ್) ನಡೆಸಿದ ತನಿಖೆಯಲ್ಲಿ, ನಿಲ್ದಾಣದ ಉತ್ತರ ಸಿಗ್ನಲ್ ಗೂಮ್ಟಿಯಲ್ಲಿ ಸಿಗ್ನಲಿಂಗ್ ಸರ್ಕ್ಯೂಟ್ ಬದಲಾವಣೆಯಲ್ಲಿನ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಕಂಡುಕೊಳ್ಳಲಾಗಿತ್ತು. ಹೌರಾದಿಂದ ಹೊರಟಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ಟ್ರೈನು ಗೂಡ್ಸ್ ಟ್ರೈನ್ಗೆ ಜೂನ್ 2ರಂದು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಆ ರೈಲಿನ ಬೋಗಿಗಳು ಪಕ್ಕದ ಟ್ರಾಕ್ ಮೇಲೆ ಬಿದ್ದಿದ್ದವು. ಇತ್ತ ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಅದೇ ಸಮಯಕ್ಕೆ ಬಂದಿದ್ದರಿಂದ ಆ ರೈಲಿನ ಕೊನೆಯ ಮೂರು ಬೋಗಿಗಳು ಅಪಘಾತಕ್ಕೀಡಾಗಿ ಭಾರೀ ದುರಂತಕ್ಕೆ ಕಾರಣವಾಗಿತ್ತು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.