Site icon Vistara News

Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

Paris Olympics 2024

ಬೆಂಗಳೂರು: ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ. ಶತಮಾನಗಳಷ್ಟು ಕಾಲ ಹಾಕಿಯಲ್ಲಿ ಭಾರತವೇ ಪಾರಮ್ಯ ವಹಿಸಿತ್ತು. ಆದರೆ ಕಳೆದೆರಡು ದಶಕಗಳಿಂದ ಜರ್ಮನಿ, ನೆದರ್ಲೆಂಡ್ಸ್​, ಬೆಲ್ಜಿಯಂನಂಥ ದೇಶಗಳು ಈ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಿತು. ಆದಾಗ್ಯೂ ಭಾರತದಲ್ಲಿ ಉತ್ತಮ ಹಾಕಿ ತಂಡವಿದೆ. ಜಾಗತಿಕ ಸ್ಪರ್ಧೆಗಳಲ್ಲಿ ಕಪ್​ ಗೆಲ್ಲು ಸಾಮರ್ಥ್ಯವೂ ಇದೆ. ಅಂತೆಯೇ ಪ್ಯಾರಿಸ್​ ಒಲಿಂಪಿಕ್ಸ್​ 2024ಕ್ಕೆ (Paris Olympics 2024) ಭಾರತದ ಪುರುಷರ ಹಾಕಿ ತಂಡ ಅರ್ಹತೆ ಪಡೆದಿದೆ ಅಲ್ಲಿಯೂ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ.

ಭಾರತ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. 8 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ ಹಾಕಿ ತಂಡವು ಒಲಿಂಪಿಕ್ಸ್ ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಹೀಗೆ ಭಾರತವು ಇಲ್ಲಿಯವರೆಗೆ ಸಾಧಿಸಿದ ಹಾಕಿಯಲ್ಲಿ ಎಲ್ಲಾ ಪೋಡಿಯಂ ಫಿನಿಶ್ ಗಳ ಪಟ್ಟಿ ಇಲ್ಲಿದೆ. ದೇಶವು

ಈ ಹಿಂದಿನ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಪುರುಷರ ಹಾಕಿ ತಂಡವು ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆಲ್ಲುವ ಮೂಲಕ ಹಾಕಿಯಲ್ಲಿ ಒಲಿಂಪಿಕ್ ಪದಕಕ್ಕಾಗಿ ಭಾರತದ 41 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತ್ತು. 1980ರ ಮಾಸ್ಕೋ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಅದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್​ನಲ್ಲಿ ಪೋಡಿಯಂ ಫಿನಿಶ್ ಮಾಡಿತ್ತು.

1928 ಆ್ಯಮ್​ಸ್ಟರ್​ಡ್ಯಾಮ್​ ಒಲಿಂಪಿಕ್ಸ್​​ನಲ್ಲಿ ಚಿನ್ನ

1928 ರ ಆ್ಯಮ್​ಸ್ಟರ್​ಡ್ಯಾಮ್​ ಒಲಿಂಪಿಕ್ಸ್​​ನ ಫೈನಲ್​ನಲ್ಲಿ ನೆದರ್ಲ್ಯಾಂಡ್ಸ್ ಅನ್ನು 3-0 ಅಂತರದಿಂದ ಸೋಲಿಸುವ ಮೂಲಕ ಭಾರತವು ಒಲಿಂಪಿಕ್ ಹಾಕಿಯಲ್ಲಿ ಮೊದಲ ಪದಕ ಗೆದ್ದಿತ್ತು. ಇದು ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಭಾರತದ ಮೊದಲ ಚಿನ್ನದ ಪದಕವೂ ಹೌದು.

1932, ಲಾಸ್ ಏಂಜಲೀಸ್​ನಲ್ಲಿ ಚಿನ್ನದ ಪದಕ

ನಾಲ್ಕು ವರ್ಷಗಳ ನಂತರ ಲಾಸ್ ಏಂಜಲೀಸ್​​ನಲ್ಲಿ ಭಾರತ ಹಾಕಿ ತಂಡ ಪ್ರಶಸ್ತಿಯನ್ನು ಉಳಿಸಿಕೊಂಡಿತು ಮತ್ತು ಒಲಿಂಪಿಕ್ಸ್​ನಲ್ಲಿ ಸತತ ಎರಡು ಚಿನ್ನದ ಪದಕಗಳನ್ನು ಗೆದ್ದಿತು. 1932ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಭಾರತ 24-1 ಗೋಲುಗಳಿಂದ ಅಮೆರಿಕ ತಂಡವನ್ನು ಮಣಿಸಿತ್ತು.

1936, ಬರ್ಲಿನ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ

ಧ್ಯಾನ್ ಚಂದ್ ನೇತೃತ್ವದ ಭಾರತ ತಂಡವು 1936 ರಲ್ಲಿ ಬರ್ಲಿನ್ ನಡೆದ ಒಲಿಂಪಿಕ್ಸ್​​ನಲ್ಲಿ ತವರಿನ ಪ್ರೇಕ್ಷಕರ ಮುಂದೆ ಜರ್ಮನಿಯನ್ನು 8-1 ಅಂತರದಿಂದ ಸೋಲಿಸಿತು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕವನ್ನು ಪೂರ್ಣಗೊಳಿಸಿತು.

1948, ಲಂಡನ್​ನಲ್ಲಿ ಚಿನ್ನದ ಪದಕ

ಎರಡನೇ ಮಹಾಯುದ್ಧದಿಂದಾಗಿ 1940 ಮತ್ತು 1944ರ ಒಲಿಂಪಿಕ್ಸ್​​ ರದ್ದಾದ ಹೊರತಾಗಿಯೂ ಭಾರತವು ಕ್ರೀಡಾಕೂಟದಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿತ್ತು. ಇದು ಸ್ವಾತಂತ್ರ್ಯದ ನಂತರ ಒಲಿಂಪಿಕ್ಸ್​ನಲ್ಲಿ ಭಾರತದ ಮೊದಲ ಪದಕ. ಮತ್ತು ಫೈನಲ್​ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 4-0 ಅಂತರದಿಂದ ಸೋಲಿಸಿತ್ತು.

1952, ಹೆಲ್ಸಿಂಕಿಯಲ್ಲಿ ಚಿನ್ನದ ಪದಕ

ನೆದರ್ಲ್ಯಾಂಡ್ಸ್ ವಿರುದ್ಧದ ಒಲಿಂಪಿಕ್ಸ್ ಫೈನಲ್​ನಲ್ಲಿ ಬಲ್ಬೀರ್ ಸಿಂಗ್ ಸೀನಿಯರ್ ಐದು ಗೋಲುಗಳನ್ನು ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತವು ಮೆಗಾ ಈವೆಂಟ್​ನಲ್ಲಿ ಸತತ ಐದನೇ ಚಿನ್ನದ ಪದಕ ಗೆದ್ದುಕೊಂಡಿತು.

ಇದನ್ನೂ ಓದಿ: Team India : ಶ್ರೀಲಂಕಾ ಪ್ರವಾಸದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕ

1956, ಮೆಲ್ಬೋರ್ನ್​ನಲ್ಲಿ ಚಿನ್ನದ ಪದಕ

ಮೆಲ್ಬೋರ್ನ್​​ನಲ್ಲಿ ನಡೆದ ಫೈನಲ್​​ನಲ್ಲಿ ಭಾರತ ನೆರೆಯ ಪಾಕಿಸ್ತಾನವನ್ನು 1-0 ಅಂತರದಿಂದ ಸೋಲಿಸಿ ಮತ್ತೊಂದು ಚಿನ್ನ ಗೆದ್ದಿತು.

1960, ರೋಮ್​ನಲ್ಲಿ ಬೆಳ್ಳಿ ಪದಕ

1960ರ ರೋಮ್ ಒಲಿಂಪಿಕ್ಸ್​ನಲ್ಲಿ ಪಾಕಿಸ್ತಾನ ವಿರುದ್ಧ 0-1 ಅಂತರದ ಸೋಲನುಭವಿಸಿದ ಭಾರತ ಸತತ ಆರು ಬಾರಿ ಚಿನ್ನದ ಪದಕದ ಬಳಿಕ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಈ ಮೂಲಕ ಭಾರತದ ಗೋಲ್ಡನ್ ಜಮಾನಕ್ಕೆ ಬಿಡುವು ಸಿಕ್ಕಿತು.

1964ರ ಟೋಕಿಯೊ ಒಲೀಂಪಿಕ್ಸ್​ನಲ್ಲಿ ಚಿನ್ನ

ಟೋಕಿಯೊದಲ್ಲಿ ನಡೆದ ಆ ನಂತರದ ಒಲಿಂಪಿಕ್ಸ್​ನಲ್ಲಿ ಭಾರತವು ಬಲವಾಗಿ ಮರಳಿತು. ಫೈನಲ್​ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸೇಡು ತೀರಿಸಿಕೊಂಡಿತು. ಅಲ್ಲದೇ ಒಲಿಂಪಿಕ್ಸ್​ನಲ್ಲಿ ಏಳನೇ ಚಿನ್ನದ ಪದಕ ಗೆದ್ದಿತು.

1968, ಮೆಕ್ಸಿಕೊದಲ್ಲಿ ಕಂಚು

ಈ ಕೂಟದೊಂದಿಗೆ ಭಾರತ ಮೊದಲಬಾರಿಗೆ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಯಿತು. ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರು. ಪಶ್ಚಿಮ ಜರ್ಮನಿಯನ್ನು ಸೋಲಿಸಿದ ನಂತರ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

1972, ಮ್ಯೂನಿಚ್​ನಲ್ಲಿ ಕಂಚು

ಸೆಮಿಫೈನಲ್​​ನಲ್ಲಿ ಪಾಕಿಸ್ತಾನ ವಿರುದ್ಧ ಸೋತ ನಂತರ ಭಾರತ ಮತ್ತೊಮ್ಮೆ ಒಲಿಂಪಿಕ್ಸ್​​ ಫೈನಲ್​ಗೆ ಪ್ರವೇಶಿಸಲು ವಿಫಲವಾಯಿತು. ನೆದರ್ಲೆಂಡ್ಸ್ ತಂಡವನ್ನು ಮಣಿಸಿದ ಭಾರತ ಎರಡನೇ ಕಂಚಿನ ಪದಕ ತನ್ನದಾಗಿಸಿಕೊಂಡಿತು.

1980; ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಗೋಲ್ಡ್

ರೌಂಡ್​ ರಾಬಿಲ್ ಲೀಗ್​ ಮಾದರಿಯಲ್ಲಿ ಆಡಿದ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಭಾರತವು ಫೈನಲ್​ನ್ಲಲಿ ಸ್ಪೇನ್ ಅನ್ನು ಸೋಲಿಸಿ ಒಲಿಂಪಿಕ್ಸ್​​ನಲ್ಲಿ 8 ನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಆದರೆ ಇಲ್ಲಿಂದ 41 ವರ್ಷಗಳ ಕಾಲ ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ಪದಕವೇ ಸಿಗಲಿಲ್ಲ.

2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ

ಜರ್ಮನಿಯನ್ನು 5-4 ಅಂತರದಿಂದ ಮಣಿಸಿದ ಭಾರತ 41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ 12ನೇ ಪದಕ ಗೆದ್ದುಕೊಂಡಿತು.

Exit mobile version