Site icon Vistara News

Swati Maliwal : ಸ್ವಾತಿ ಮಾಲಿವಾಲ್​​ ಮೇಲೆ ಕೇಜ್ರಿವಾಲ್ ಸಹಾಯಕನಿಂದ ಹಲ್ಲೆ; ಆಪ್​​ನಿಂದ ತಪ್ಪೊಪ್ಪಿಗೆ

Swati Maliwal

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಿಎಂ ನಿವಾಸದೊಳಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ (Swati Maliwal ) ಅರೋಪಿಸಿದ ಮರುದಿನ ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಈ ಮಾಹಿತಿಯನ್ನು ಒಪ್ಪಿಕೊಂಡಿದೆ. ಎಎಪಿ ಮುಖ್ಯಸ್ಥರ ಸಹಾಯಕ ತಪ್ಪು ಮಾಡಿರುವುದು ಸತ್ಯ ಕೇಜ್ರಿವಾಲ್ ಅವರು ಈ ವಿಷಯವನ್ನು ಗಮನಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಎಪಿ ಹೇಳಿದೆ.

ಹಿರಿಯ ಎಎಪಿ ನಾಯಕಿ ಮತ್ತು ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಸೋಮವಾರ ಬೆಳಿಗ್ಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿ ಅರವಿಂದ್ ಕೇಜ್ರಿವಾಲ್ ಅವರ ವೈಯಕ್ತಿಕ ಸಹಾಯಕ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಅವರು ಅಧಿಕೃತ ದೂರು ದಾಖಲಿಸಿರಲಿಲ್ಲ. ಈ ಮುಜುಗರದ ವಿವಾದದ ಬಗ್ಗೆ ಸ್ವಾತಿ ಮಲಿವಾಲ್ ಅಥವಾ ಆಮ್ ಆದ್ಮಿ ಪಕ್ಷ (ಎಎಪಿ) ಸೋಮವಾರ ಪ್ರತಿಕ್ರಿಯಿಸಲಿಲ್ಲ.

ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ದೆಹಲಿಯ ಅವರ ಮನೆಯಲ್ಲಿ ಕಾಯುತ್ತಿದ್ದಾಗ ಕೇಜ್ರಿವಾಲ್ ಅವರ ಸಹಾಯಕ ಸ್ವಾತಿ ಮಾಲಿವಾಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಒಪ್ಪಿಕೊಂಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಡ್ರಾಯಿಂಗ್ ರೂಂನಲ್ಲಿ ಈ ಘಟನೆ ನಡೆದಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. “ನಿನ್ನೆ, ಖಂಡನೀಯ ಘಟನೆ ನಡೆದಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಸ್ವಾತಿ ಮಾಲಿವಾಲ್ ಅವರ ನಿವಾಸಕ್ಕೆ ಹೋಗಿದ್ದರು. ಡ್ರಾಯಿಂಗ್ ರೂಮ್​ನಲ್ಲಿ ಅವರಿಗೆ ಕಾಯುತ್ತಿದ್ದಾಗ, ಬಿಭವ್ ಕುಮಾರ್ ಅವರಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸಿಎಂ ಈ ವಿಷಯವನ್ನು ಅರಿತುಕೊಂಡಿದ್ದಾರೆ ಮತ್ತು ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸಂಜಯ್​ ಸಿಂಗ್​ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಬೆಳಿಗ್ಗೆ 9.34 ಕ್ಕೆ ಪಿಸಿಆರ್ ಸಂಖ್ಯೆಗೆ ಕರೆ ಮಾಡಿ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿ ಮಾಡಿದ್ದಾರೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದರು.

ದೂರು ದಾಖಲಿಸದ ಸ್ವಾತಿ

ಸೋಮವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಬಂದ ಸ್ವಾತಿ ಅವರು ಐದು ನಿಮಿಷಗಳ ನಂತರ ಔಪಚಾರಿಕ ದೂರು ದಾಖಲಿಸದೆ ಹೊರಟುಹೋಗಿದ್ದರು. ಹಲ್ಲೆ ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆ ಕಡ್ಡಾಯ ಎಂದು ಹೇಳಿದ ನಂತರ ಅವರು ಹೊರಟುಹೋದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು. ಕೇಜ್ರಿವಾಲ್ ಅವರ ಮನೆಯನ್ನು ‘ಬಾಕ್ಸಿಂಗ್ ರಿಂಗ್’ ಎಂದು ಕರೆದಿದೆ. ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೂ ಅವರ ಮನೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದೆ

Exit mobile version