ಗದಗ : ಭಾನುವಾರ ಮುಂಜಾನೆ ವೇಳೆ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ (Accident News ) ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ದೇಹಗಳು ಛಿದ್ರಗೊಂಡಿವೆ. ಮೃತಪಟ್ಟವರೆಲ್ಲರೂ ದೇವಸ್ಥಾನಕ್ಕೆ ಹೊರಟಿದ್ದರು. ನೇರವಾದ ರಸ್ತೆಯಲ್ಲಿ ಎರಡೂ ವಾಹನಗಳು ಪರಸ್ಪರ ಅಪ್ಪಳಿಸಿದ್ದು ಸಣ್ಣ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಗದಗ ಜಿಲ್ಲೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಮೃತಪಟ್ಟವರಾಗಿದ್ದಾರೆ. ಬಸ್ ಇಳಕಲ್ನಿಂದ ಹುಬ್ಬಳ್ಳಿ ಗೆ ಹೊರಟ್ಟಿತ್ತು. ಕಾರು ಹಾವೇರಿಯಿಂದ ಕಲ್ಲಾಪೂರ ಕಡೆಗೆ ಸಾಗುತ್ತಿತ್ತು. ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಕುಟುಂಬವು ಹೊರಟಿತ್ತು. ಕೊಣ್ಣೂರು ಬಳಿಕ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಘಾತಕ್ಕೆ ಕಾರಿನಲ್ಲಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಸಂಪೂರ್ಣ ನಜ್ಜುಗುಜ್ಜು
ಅಫಘಾತಕ್ಕೆ ಯಾರ ನಿಲ್ಷಕ್ಷ್ಯ ಎಂಬುದು ಪ್ರಾಥಮಿಕ ಅವಲೋಕನದಲ್ಲಿ ತಿಳಿದುಬಂದಿಲ್ಲ. ಆದರೆ, ಬಸ್ನ ಆಘಾತಕ್ಕೆ ಕಾರಿನ ರೂಫ್ ಸಂಪೂರ್ಣವಾಗಿ ಹಾರಿ ಹೋಗಿದೆ. ಅದರೊಳಗೆ ಇದ್ದ ಪ್ರಯಾಣಿಕರು ಸಂಪೂರ್ಣವಾಗಿ ಜರ್ಜರಿತಗೊಂಡು ಮೃತಪಟ್ಟಿದ್ದಾರೆ. ಕಾರಿನ ಮುಂಭಾಗದಲ್ಲಿ ಸೀಟಿನಲ್ಲಿ ದುದ್ರಪ್ಪ ಹಾಗೂ ಪುತ್ರ ವಿಜಯ್ ಕುಳಿತಿದ್ದರೆ, ಹಿಂದಿನ ಸೀಟಿನಲ್ಲಿ ರಾಜೇಶ್ವರಿ ಹಾಗೂ ಐಶ್ವರ್ಯಾ ಕುಳಿತಿದ್ದು. ಎಲ್ಲರೂ ಕುಳಿತಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಭೀಕರತೆಗೆ ಸಾಕ್ಷಿಯಾಗಿದೆ.
ಹಳ್ಳಕ್ಕೆ ಇಳಿದ ಬಸ್: ಅಪಘಾತದ ಬಳಿಕ ಬಸ್ ನಿಯಂತ್ರಣ ಪಡೆದುಕೊಳ್ಳದೆ ಹಳ್ಳವೊಂದಕ್ಕೆ ಇಳಿದಿದೆ. ನೇರ ರಸ್ತೆಯಲ್ಲಿ ಎರಡೂ ವಾಹನಗಳು ಗರಿಷ್ಠ ವೇಗದಲ್ಲಿ ಸಾಗುತ್ತಿದ್ದ ಸಾಧ್ಯತೆಗಳು ಕಾಣಿಸುತ್ತಿದೆ. ಕಾರಿಗೆ ಗುದ್ದಿದ ಬಸ್ನ ಮುಂಭಾಗದಲ್ಲಿ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಜಾರಿ ಹಳ್ಳಕ್ಕೆ ಇಳಿದಿದೆ. ಬಸ್ನಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬ ಕುರಿತು ಮಾಹಿತಿ ಲಭ್ಯವಿಲ್ಲ. ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಮೃತದೇಹಗಳನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.
ಇದನ್ನೂ ಓದಿ: Liquor Theft : ಡಾಬಾದಿಂದ ಲೋಕಲ್ ಬ್ರಾಂಡ್ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ
ಬೆಚ್ಚಿದ ಸ್ಥಳೀಯರು
ಭಾನುವಾರ ಮುಂಜಾನೆ ನಡೆದ ಅಪಘಾತಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬೆಳಗ್ಗೆದ್ದು ಶುಭ ವಾರ್ತೆಯನ್ನು ನಿರೀಕ್ಷಿಸಿದ್ದ ಸ್ಥಳೀಯ ನಿವಾಸಿಗಳು ಅಪಘಾತದ ದೃಶ್ಯಗಳನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಒಂದೇ ಕುಟುಂಬದ ಎಲ್ಲರೂ ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಯಾರ ತಪ್ಪು ಹೆಚ್ಚಿದೆ ಎಂಬುದರ ಬಗ್ಗೆಯೂ ಅವರೆಲ್ಲೂ ಚರ್ಚೆ ನಡೆಸುತ್ತಿದ್ದಾರೆ. ಅಪಘಾತದ ಬಳಿಕ ಬಸ್ ನ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸ್ಥಳಕ್ಕೆ ನರಗುಂದ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.