Site icon Vistara News

CM Siddaramaiah: ಅಲೆಮಾರಿ ಕುರಿಗಾಹಿಗಳ ಮೇಲಿನ ದೌರ್ಜನ್ಯ ತಡೆಯಲು ಕಾಯ್ದೆ; ಸಿದ್ದರಾಮಯ್ಯ

Act to prevent violence against migrant shepherds and their property: CM Siddaramaiah promises

ಬೆಂಗಳೂರು: ಕುರಿಗಾಹಿಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಅಲೆಮಾರಿ ಕುರಿಗಾಹಿ ಸಮುದಾಯಗಳ ಮುಖಂಡರ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ, ಬಳಿಕ ಅವರು ಮಾತನಾಡಿದರು.

ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮಾತ್ರ ಮೇಯಿಸಲು ಅವಕಾಶ ನೀಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕುರಿಗಳು ಸತ್ತರೆ ಒಂದು ಕುರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡುವ ಅನುಗ್ರಹ ಯೋಜನೆ ಜಾರಿಯಲ್ಲಿದೆ. ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಇದನ್ನೂ ಓದಿ: Transfer Guidelines: ಸರ್ಕಾರಿ ನೌಕರರ ವರ್ಗಾವಣೆಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ; ಜು.9ರವರೆಗೆ ಅವಕಾಶ

ರಾಜ್ಯದಲ್ಲಿನ ವಲಸೆ ಕುರಿಗಾರರ ಮತ್ತು ಅವರ ಸ್ವತ್ತುಗಳ ಮೇಲಿನ ದೌರ್ಜನ್ಯ ತಡೆಯುವ ಕಾಯ್ದೆ ರೂಪಿಸುವುದು, ಕುರಿಗಳಿಗೆ ಉಚಿತ ಲಸಿಕೆ ನೀಡಲೂ ಅಗತ್ಯ ಸೂಚನೆ ನೀಡಲಾಗುವುದು. ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಗುರುತಿನ ಚೀಟಿ ಆಧಾರದ ಮೇಲೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂದೂಕು ಪರವಾನಗಿ ನೀಡಲು ವ್ಯವಸ್ಥೆ, ಕುರಿಗಾಹಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಆದ್ಯತೆ ಮೇರೆಗೆ ಪ್ರವೇಶ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು ಇವುಗಳಿಗೆ ಸರ್ಕಾರಿ ಆದೇಶ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಪಶುಸಂಗೋಪನಾ ಇಲಾಖೆಯಲ್ಲಿ 1300 ವೈದ್ಯರ ಹುದ್ದೆ ಖಾಲಿ ಇದ್ದು, ಪ್ರಸ್ತುತ 400 ವೈದ್ಯರನ್ನು ನೇಮಕ ಮಾಡಲಾಗುತ್ತಿದೆ. ಮುಂದಿನ ವರ್ಷ ಬಾಕಿ ವೈದ್ಯರ ನೇಮಕಾತಿ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: Bengaluru News: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಜೂ.30ಕ್ಕೆ

ಕುರಿಗಾರರು ಕ್ಯಾಂಪ್ ಮಾಡಿರುವ ಕಡೆಗಳಲ್ಲೇ ವೈದ್ಯರು ಬಂದು ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗುವುದು. ಕುರಿಗಾರರ ಕುರಿ ಕಳ್ಳತನವಾದರೆ ಕೂಡಲೇ ಪ್ರಕರಣ ದಾಖಲು ಮಾಡಬೇಕು, ಬಂಧಿಸಿ ತನಿಖೆ ಮಾಡಲು ಹಾಗೂ ರಕ್ಷಣೆ ನೀಡುವ ವ್ಯವಸ್ಥೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗುವುದು. ಹಿಂದಿನ ಸರ್ಕಾರವು ಸತ್ತ ಕುರಿಗಳಿಗೆ ನೀಡುವ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ದು, ಈ ಕುರಿತು ಪರಿಹಾರ ನೀಡುವ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಲಾಗುವುದು ಎಂದರು. ಗೋಮಾಳಗಳನ್ನು ಯಾರಿಗೂ ಪರಭಾರೆ ಮಾಡಬಾರದು ಎಂದು ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಗೋಮಾಳಗಳ ರಕ್ಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇದನ್ನೂ ಓದಿ: Share Market : ಷೇರು ಮಾರುಕಟ್ಟೆಯಲ್ಲಿ ನೂತನ ದಾಖಲೆ; ಮೊದಲ ಬಾರಿಗೆ 78,000 ಮಟ್ಟವನ್ನು ದಾಟಿದ ಸೆನ್ಸೆಕ್ಸ್

ಈ ಸಂದರ್ಭದಲ್ಲಿ ಪಶುಸಂಗೋಪನಾ ಸಚಿವ ವೆಂಕಟೇಶ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ವರ್ತೂರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಉಪಸ್ಥಿತರಿದ್ದರು.

Exit mobile version