ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವರನ್ನು ಹೊಡೆದು ಕೊಂದ ಆರೋಪದ ಮೇಲೆ ಪೊಲೀಸ್ ವಶದಲ್ಲಿರುವ ನಟ ದರ್ಶನ್ ವಿರುದ್ಧ (Actor Darshan Arrested) ರೌಡಿ ಪಟ್ಟಿ ತೆರೆಯಲು ಬೆಂಗಳೂರು ನಗರ ಪೊಲೀಸರು ಸಿದ್ದ ರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಪದೇ ಪದೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಅವರ ಮೇಲೆ ಕಾನೂನಿನ ಹಿಡಿತ ಸ್ಥಾಪಿಸಲು ರೌಡಿ ಪಟ್ಟಿ ಅನಿವಾರ್ಯ ಎಂಬ ಅಭಿಪ್ರಾಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪಿ ಮೇಲೆ ರೌಡಿ ಪಟ್ಟಿಯನ್ನು ತೆರೆಯಲಾಗುತ್ತದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲೂ ದರ್ಶನ್ ಪ್ರಮುಖ ಆರೋಪಿ. ಹೀಗಾಗಿ ಅವರ ಮೇಲೆಯೂ ರೌಡಿ ಶೀಟರ್ ಓಪನ್ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.
ದರ್ಶನ್ ಈ ಹಿಂದೆಯೂ ಹಲವಾರು ಬಾರಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಬೆದರಿಕೆ, ನಿಂದನೆ ಸೇರಿದಂತೆ ನಾನಾ ರೀತಿಯಲ್ಲಿ ಅವರು ಕಾನೂನು ಕ್ರಮವನ್ನು ಎದುರಿಸಿದ್ದರು. ಹೀಗಾಗಿ ಅವರನ್ನು ರೌಡಿ ಪಟ್ಟಿಯೊಳಗೆ ಸೇರಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಪೊಲೀಸ್ ಇಲಾಖೆಯ ಆಲೋಚನೆಯಾಗಿದೆ.
ರೇಣುಕಾ ಸ್ವಾಮಿ ಅವರನ್ನು ಕೊಲೆ ಮಾಡುವ ಉದ್ದೇಶವಿಲ್ಲದೆ ಅಪಹರಣ ಮಾಡಿದ್ದರು. ಗಂಭೀರ ರೂಪದಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೊಲೆ ಮಾಡಿ ಶವ ಮುಚ್ಚಿಡುವ ಹಾಗೂ ಸಾಕ್ಷಿನಾಶ ಪಡಿಸುವ ಯತ್ನ ಮಾಡಿದ್ದಾರೆ. ಇವೆಲ್ಲವೂ ಅಪಾಯಕಾರಿ ಕ್ರಿಮಿನಲ್ ಚಟುವಟಿಕೆಗಳಾಗಿವೆ.
ರೌಡಿಶೀಟ್ ಓಪನ್ ಆದ್ರೆ ಏನಾಗುತ್ತೆ.?
ಇಷ್ಟು ವರ್ಷಗಳ ಕಾಲ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಿದ್ದ ಹಾಗೂ ಅಪಾರ ಗೌರವ ಗಳಿಸಿಕೊಂಡಿದ್ದ ನಟ ದರ್ಶನ್ ರೌಡಿಶೀಟರ್ ಅನ್ನೋ ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ. ಶಾಂತಿಸುವ್ಯವಸ್ಥೆಗೆ ಭಂಗ ತರುವ ಆರೋಪದ ಮೇಲೆ ಆಗಾಗ ಸಿಆರ್ಪಿಸಿ 110 ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಪದೇ ಪದೆ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಬೇಕಾಗುತ್ತದೆ.
ಚುನಾವಣೆ ಹಾಗೂ ಇನ್ಯಾವುದಾದರೂ ತುರ್ತು ಸಂಧರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮನೆಯ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ. ಯಾವುದೇ ಅನುಮತಿ ಇಲ್ಲದೆ ಪರಿಶೀಲನೆ ನಡೆಸುತ್ತಾರೆ. ರೌಡಿಚಟುವಟಿಕೆ ಸಕ್ರಿಯರಾಗಿದ್ದಾರೆ ಎಂಬ ಕಾರಣದಲ್ಲಿ ಅವರ ಮೇಲೆ ನಿಗಾ ಇಡುತ್ತಾರೆ. ಖಾಸಗಿತನ ನಷ್ಟವಾಗುತ್ತದೆ.
ತುರ್ತು ಸಂದರ್ಭದಲ್ಲಿ ತಹಸೀಲ್ದಾರರ ಮುಂದೆ ಹಾಜರಾಗಿ ಬಾಂಡ್ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪೊ ಲೀಸರು ನಡೆಸುವ ರೌಡಿ ಪೆರೇಡ್ ನಲ್ಲಿ ಇತರೆ ರೌಡಿಗಳಂತೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಲಿದೆ. ಅವರ ಟೀಕೆಗಳನ್ನು ಕೇಳಬೇಕಾಗುತ್ತದೆ.
ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್?
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ (Actor Darshan Arrested) ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ದರ್ಶನ್ ಜತೆಗಿದ್ದ ಇನ್ಸ್ಟಾಗ್ರಾಮ್ ಪ್ರೊಫೈಲ್ ಫೋಟೊ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್ಫಾಲೋ ಮಾಡಿದ್ದಾರೆ. ಇದೀಗ ವಿಜಯಲಕ್ಷ್ಮಿ ವಿಚ್ಛೇದನ ಪಡೆಯುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಕೌಟುಂಬಿಕ ಕಲಹದಲ್ಲಿ ʼದಾಸʼ
ದರ್ಶನ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇನ್ನು ಕೌಟುಂಬಿಕ ಕಲಹದಲ್ಲಿಯೂ 28 ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದರು. 2011ರಲ್ಲಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. 2016ರಲ್ಲಿ ಮತ್ತೊಮ್ಮೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದ ಘಟನೆಯೂ ನಡೆದಿತ್ತು. ಮಗನನ್ನು ಹತ್ಯೆ ಮಾಡುವುದಾಗಿಯೂ ದರ್ಶನ್ ಬೆದರಿಸುವುದಾಗಿ ಕೇಳಿ ಬಂದಿತ್ತು. ಮಾತ್ರವಲ್ಲ ವಿಜಯಲಕ್ಷ್ಮಿ ಅವರಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದರು. ಅಂಬರೀಶ್ ಮಧ್ಯಪ್ರವೇಶದಿಂದ ವಿಜಯಲಕ್ಷ್ಮಿ ಎಲ್ಲವನ್ನೂ ಮರೆತು ರಾಜಿ ಸಂಧಾನಕ್ಕೆ ಒಪ್ಪಿದ್ದರು.