ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಸ್ಟಡಿಯಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳನ್ನು ಪಟ್ಟಣಗೆರೆಯ ಶೆಡ್‌ಗೆ ಬುಧವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಆರೋಪಿಗಳನ್ನು ತಂಡಗಳಾಗಿ ವಿಂಗಡಿಸಿ, ಶೆಡ್‌ನ ಪ್ರತಿ ಮೂಲೆಯಲ್ಲೂ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಲಾಗಿದೆ. ಇನ್ನು ಬಂಧನದ ಬಳಿಕ ಆತಂಕಗೊಂಡಿರುವ ನಟ ದರ್ಶನ್, ಮಹಜರು ವೇಳೆ ಅಮಾಯಕನಂತೆ ನಿಂತಿದ್ದದ್ದು ಕಂಡುಬಂದಿತು.
ಬಿಗಿ ಭದ್ರತೆಯಲ್ಲಿ ದರ್ಶನ್, ಪವಿತ್ರಾಗೌಡ ಸೇರಿ 13 ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಪಟ್ಟಣಗೆರೆ ಶೆಡ್‌ನ ಎಲ್ಲ ಕಡೆ ಪರಿಶೀಲನೆ ನಡೆಸಿ, ಪ್ರಕರಣದ ಬಗ್ಗೆ ಇಂಚಿಂಚೂ ಮಾಹಿತಿ ಕಲೆಹಾಕಲಾಗಿದೆ. ಘಟನೆಯಲ್ಲಿ ಯಾರ ಪಾತ್ರ ಏನು? ಯಾರು ಸ್ಥಳದಲ್ಲಿ ಇದ್ದರು ಎಂದು ಒಬ್ಬೊಬ್ಬರ ಬಳಿಯಿಂದ ಮಾಹಿತಿ ಪಡೆಯಲಾಗಿದೆ. ಸ್ಥಳ ಮಹಜರಿನ ಪ್ರತಿ ಹಂತದಲ್ಲಿ ವಿಡಿಯೊ ಸೆರೆಹಿಡಿಯಲಾಗಿದೆ.
ಇದನ್ನೂ ಓದಿ | Actor Darshan: ದರ್ಶನ್ ಮೇಲೆ ಮತ್ತೊಂದು ಗಂಭೀರ ಆರೋಪ; ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ, ಬಾಡೂಟ, ಎಣ್ಣೆ ಪಾರ್ಟಿ!
ಮಹಜರಿನ ಜತೆಯಲ್ಲಿ ಸಾಕ್ಷ್ಯಗಳನ್ನು ಕೂಡ ಎಫ್ಎಸ್ಎಲ್ ತಂಡ ಕಲೆಹಾಕಿದೆ. ವಾಹನಗಳ ಸೀಜಿಂಗ್ ಯಾರ್ಡ್‌ನ ಮೂಲೆ ಮೂಲೆಯಲ್ಲೂ ಪರಿಶೀಲನೆ ನಡೆಸಲಾಗಿದೆ. ಮೃತ ರೇಣುಕಸ್ವಾಮಿಯನ್ನು ಅಕ್ರಮವಾಗಿ ಬಂಧದಲ್ಲಿರಿಸಿಕೊಂಡ ಶೆಡ್‌ನಲ್ಲೂ ಆರೋಪಿಗಳನ್ನ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಲಾಗಿದೆ.
ಪ್ರಕರಣದಲ್ಲಿ ಮತ್ತೊಬ್ಬ ಮಹಿಳೆ ಭಾಗಿ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳ ಪೈಕಿ 13 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಮತ್ತೊಬ್ಬ ಮಹಿಳೆ ಕೂಡ ಭಾಗಿಯಾಗಿರುವುದು ತಿಳಿದುಬಂದಿದೆ. ಆರೋಪಿ ಅನು ಎಂಬ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಜಗದೀಶ್ @ ಜಗ್ಗ, ಅನು, ರವಿ, ರಾಜು ಎಂಬುವವರು ಸದ್ಯ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಹೇಗೆ ನಡೆದಿತ್ತು?
ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್ ಸೇರಿ ಹಲ್ಲೆ ಮಾಡಿದ್ದರು.
ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ 80 ಪರ್ಸೆಂಟ್ ಸಾವನ್ನಪ್ಪಿದ್ದ. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೊನೆಗೆ ನಟ ದರ್ಶನ್ ಸಹ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ | Actor Darshan: ಆರೋಪಿ ದರ್ಶನ್‌ಗೆ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ತರಿಸಿದ್ದ ಪೊಲೀಸರು!
ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.