ಮುಂಬಯಿ: ಸುಪ್ರೀಂಕೋರ್ಟ್ ಅದಾನಿ-ಹಿಂಡೆನ್ ಬರ್ಗ್ ಬಿಕ್ಕಟ್ಟಿನ ಬಗ್ಗೆ ತನಿಖೆಗೆ ಆದೇಶ ನೀಡಿರುವ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರುಗಳಲ್ಲಿ ಚೇತರಿಕೆ ಉಂಟಾಗಿದೆ. ಬಿಎಸ್‌ಇ ಸೆನ್ಸೆಕ್ಸ್ ಗುರುವಾರ ಬೆಳಗ್ಗೆ 284 ಅಂಕ ಕುಸಿದು 59,126 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿತ್ತು. (Adani stocks) ನಿಫ್ಟಿ 69 ಅಂಕ ಕುಸಿದು 17,381ಕ್ಕೆ ವಹಿವಾಟು ನಡೆಸುತ್ತಿತ್ತು. ಹೀಗಿದ್ದರೂ ಅದಾನಿ ಗ್ರೂಪ್ ಕಂಪನಿಗಳ ಷೇರು ದರ ಚೇತರಿಸಿತು.
ಅದಾನಿ ಎಂಟರ್‌ಪ್ರೈಸಸ್ ಷೇರು ದರ 1602 ರೂ. (2.46% ಏರಿಕೆ) ಚೇತರಿಸಿತು. ಅದಾನಿ ಪೋರ್ಟ್ ಷೇರು ದರ 610 ರೂ.ಗೆ ಏರಿತು (1.31% ಹೆಚ್ಚಳ)
ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿ ತನಿಖೆ ನಡೆಸಲು (Adani vs Hindenburg) ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ಜತೆಗೆ ಈಗಿನ ವಿದ್ಯಮಾನಗಳ ಸ್ಥಿತಿಗತಿ ಬಗ್ಗೆ ಇನ್ನೆರಡು ತಿಂಗಳೊಳಗೆ ವರದಿ ನೀಡುವಂತೆ ಸೆಬಿಗೆ ತಿಳಿಸಿದೆ. ತಜ್ಞರ ಸಮಿತಿಯಲ್ಲಿ ಒಪಿ ಭಟ್, ಜೆಪಿ ದೇವಧರ್, ಕೆವಿ ಕಾಮತ್, ನಂದನ್ ನಿಲೇಕಣಿ, ಸೋಮಶೇಖರ್ ಸುಂದರೇಶನ್ ಇದ್ದಾರೆ. ಅದಾನಿ-ಹಿಂಡೆನ್ ಬರ್ಗ್ ವಿವಾದಕ್ಕೆ ಕಾರಣ, ಹೂಡಿಕೆದಾರರ ಹಿತ ರಕ್ಷಣೆ, ಮಾರುಕಟ್ಟೆ ವೈಫಲ್ಯದ ಬಗ್ಗೆ ಸಮಿತಿ ತನಿಖೆ ನಡೆಸಲಿದೆ. ಅದಾನಿ ಕಂಪನಿಗಳು ಷೇರು ಮಾರುಕಟ್ಟೆಯ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂಬುದರ ಬಗ್ಗೆ ತನಿಖೆಗೆ ಅರ್ಜಿದಾರರು ಒತ್ತಾಯಿಸಿದ್ದರು.