Site icon Vistara News

Aman sehrawat : ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್​​; ಭಾರತದ ಒಲಿಂಪಿಕ್ಸ್ ಪದಕಗಳ ಸಂಖ್ಯೆ 6ಕ್ಕೆ ಏರಿಕೆ

Aman Sehrawat

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ ನ ಪುರುಷರ ಕುಸ್ತಿ 57 ಕೆ. ಜಿ ವಿಭಾಗದಲ್ಲಿ ಭಾರತದ ಅಮನ್​ ಸೆಹ್ರಾವತ್​ ಕಂಚಿನ ಪದಕ ಗೆದ್ದಿದ್ದಾರೆ. ಅವರು ಪೊರ್ಟೊ ರಿಕೊ ದೇಶದ ಡೇರಿಯನ್​ ಕ್ರೂಜ್ ವಿರುದ್ಧ 13-5 ಅಂಕಗಳ ಅಂತರದ ಜಯ ಸಾಧಿಸುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದರು. 21 ವರ್ಷದ ಅಮನ್​ ಚೊಚ್ಚಲ ಒಲಿಂಪಿಕ್ಸ್​ನಲ್ಲಿಯೇ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದರು. ಇದರೊಂದಿಗೆ ಭಾರತಕ್ಕೆ ಕುಸ್ತಿಯಲ್ಲಿ ಒಂದು ಕಂಚಿನ ಪದಕ ಒಲಿಯಿತು. ಕುಸ್ತಿ ಹಾಗೂ ಬಾಕ್ಸಿಂಗ್ ಭಾರತದ ಪಾಲಿಗೆ ಪದಕ ತರುವ ವಿಭಾಗವಾಗಿದ್ದರೂ ಈ ಬಾರಿ ಹೆಚ್ಚು ನಿರಾಸೆ ಉಂಟಾಗಿತ್ತು. ಇದೀಗ ಕಂಚಿನ ಪದಕ ಗೆಲ್ಲುವ ಮೂಲಕ ಆ ಕೊರತೆಯನ್ನು ನೀಗಿಸಿದ್ದಾರೆ.

ಅಮನ್ ಅವರ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್​ ಗೆದ್ದಿದ್ದರೆ, ಶೂಟರ್​​ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್​ಜೋತ್ ಸಿಂಗ್​ ಜತೆಗೆ. ಪುರುಷರ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ. ಇದೀಗ ಅಮನ್​ ಒಂದು ಪದಕ ಗೆದ್ದಿದ್ದಾರೆ.

ಕಂಚಿನ ಪದಕ ಹಣಾಹಣಿಯಲ್ಲಿ ಅಮನ್ ಆರಂಭದಲ್ಲಿಯೇ ಕೆಚ್ಚೆದೆ ತೋರಿದರು. ಎದುರಾಳಿ ಮೇಳೆ ಸಂಪೂರ್ಣ ಮೆಲುಗೈ ಸಾಧಿಸಿದರು. ಅವರ ಬಿಗಿ ಹಿಡಿತಕ್ಕೆ ಎದುರಾಳಿಯ ಲಯ ತಪ್ಪಿತು. ಹೀಗಾಗಿ ಅಮನ್​ ನಿರಂತರವಾಗಿ ಅಂಕಗಳನ್ನು ಗೆದ್ದರು. ಕೊನೇ ಹಂತದಲ್ಲಿ ಸುಸ್ತಾದ ಎದುರಾಳಿ ಸೋಲೊಪ್ಪಿಕೊಂಡರು.

ಪ್ರೀ ಕ್ವಾರ್ಟರ್​ ಮತ್ತು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಿದ್ದ ಅಮನ್​ ಬಳಿಕ ನಡೆದ ಸೆಮಿ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡಿದ್ದರು. ಹಿಗುಚಿ ರಿಯೊ ಒಲಿಂಪಿಕ್ಸ್‌ನಲ್ಲಿ (2016) ಬೆಳ್ಳಿ ಗೆದ್ದ ಸಾಧಕನಾಗಿದ್ದರು.

ಗುರುವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮನ್​ ಅಲ್ಬೆನಿಯಾದ ಝೆಲಿಮ್ಖಾನ್ ಅಬಕರೋವ್ ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಮಣಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಅಮನ್​ ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್​ ಟೂರ್ನಿಯಾಗಿದೆ. ಮೊದಲ ಪ್ರಯತ್ನದಲ್ಲೇ ಅವರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ನಡೆದಿದ್ದ ಏಷ್ಯನ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಅಮನ್​ ಅವರದ್ದಾಗಿದೆ.

ಇದನ್ನೂ ಓದಿ: Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇದೀಗ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಂಚಿನ ಪದಕ ನಿರೀಕ್ಷೆಯಲ್ಲಿದ್ದಾರೆ.

Exit mobile version