ಮುಂಬೈ: ಇತ್ತೀಚೆಗೆ ಮುಂಬಯಿಯ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ರಿಲಯನ್ಸ್ ಜಿಯೊ ವರ್ಲ್ಡ್ ಸೆಂಟರ್ನೊಳಗೆ ನೂತನವಾಗಿ ನಿರ್ಮಿಸಲಾಗಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು. ನೀತಾ ಅಂಬಾನಿ, ಮುಕೇಶ್ ಅಂಬಾನಿ ಮತ್ತು ಅವರ ಇಡೀ ಕುಟುಂಬದವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮುಕೇಶ್ ಅಂಬಾನಿ ಅವರ ಕಾರ್ಯಕ್ರಮ ಎಂದರೆ ಕೇಳಬೇಕೇ, ಬಾಲಿವುಡ್ ಗಣ್ಯರು ಸೇರಿ ಹಲವರು ಭಾಗಿಯಾಗಿದ್ದರು. ಅಲ್ಲದೆ, ಪಾರ್ಟಿಯೂ ಇತ್ತು. ಎಲ್ಲವೂ ಅದ್ಧೂರಿಯಾಗಿಯೇ ನಡೆಯಿತು. ಆದರೆ, ಪಾರ್ಟಿ ವೇಳೆ ತಿಂಡಿ ತಿಂದು, ಕೈ ಒರೆಸಿಕೊಳ್ಳಲು ಟಿಶ್ಯು ಪೇಪರ್ ಬದಲು, ಅಂಬಾನಿಯವರು 500 ರೂ. ನೋಟುಗಳನ್ನು ಇಟ್ಟಿದ್ದರು ಎಂಬ ವದಂತಿ (Fact Check) ಹರಿದಾಡಿದೆ.
ಏನಿದು ವದಂತಿ?
ಟ್ವಿಟರ್‌ನಲ್ಲಿ ರತ್ನಿಶ್ ಎಂಬುವರು ತಿಂಡಿಗೆ 500 ರೂಪಾಯಿಗಳನ್ನು ಅಂಟಿಸಿರುವ ಫೋಟೊ ಶೇರ್ ಮಾಡಿದ್ದಾರೆ. ಟಿಶ್ಯು ಪೇಪರ್ ಇಡುವ ಜಾಗದಲ್ಲಿ ಗರಿ ಗರಿ 500 ರೂ. ನೋಟುಗಳನ್ನು ಇರಿಸಲಾಗಿದೆ. ಹಾಗೆಯೇ, “ಅಂಬಾನಿಯವರ ಪಾರ್ಟಿಯಲ್ಲಿ ಟಿಶ್ಯು ಪೇಪರ್ ಇರಿಸುವ ಜಾಗದಲ್ಲಿ 500 ರೂ. ನೋಟುಗಳು ಇರುತ್ತವೆ” ಎಂದು ಬರೆದುಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದ್ದು, ತುಂಬ ಜನ ಇದನ್ನು ನಂಬಿದ್ದಾರೆ.
“ನಮಗೂ ಇಂತಹ ಪಾರ್ಟಿಗೆ ಆಹ್ವಾನ ನೀಡಬಾರದಾ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೂ ಇಂತಹ ಪಾರ್ಟಿ ಆಯೋಜಿಸಬೇಕು” ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. “ನಮ್ಮನ್ನು ಬರೀ ವೇಯ್ಟರ್ ಆಗಿಯಾದರೂ ನೇಮಿಸಿಕೊಳ್ಳಿ ಅಂಬಾನಿಯವರೇ, ಉಳಿದಿದ್ದೆಲ್ಲ ನಾವು ನೋಡಿಕೊಳ್ಳುತ್ತೇವೆ” ಎಂದು ಮತ್ತೊಬ್ಬರು ಹೇಳಿದ್ದಾರೆ. ಹೀಗೆ, ಹಲವಾರು ಜನ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿದೆ ವೈರಲ್ ಆದ ಫೋಟೊ ಮತ್ತು ನಿಜಾಂಶ
ವಾಸ್ತವ ಏನು?
ಆದರೆ, ವಾಸ್ತವದ ಪ್ರಕಾರ, ವೈರಲ್ ಆದ ಫೋಟೊ ಅಂಬಾನಿಯವರು ನೀಡಿದ ಪಾರ್ಟಿಯಲ್ಲಿ ತೆಗೆದಿದ್ದು ಅಲ್ಲ ಎಂಬುದನ್ನು ಜನರೇ ಪತ್ತೆ ಹಚ್ಚಿದ್ದಾರೆ. ದೌಲತ್ ಕಿ ಚಾಟ್ ಎಂಬ ರೆಸ್ಟೋರೆಂಟ್‌ನಲ್ಲಿ ಟಿಶ್ಯು ಜಾಗದಲ್ಲಿ ಹೀಗೆ ನಕಲಿ ನೋಟುಗಳನ್ನು ಇಟ್ಟು ತಿಂಡಿ ನೀಡಲಾಗುತ್ತದೆ ಎಂದು ಫೋಟೊ ಸಮೇತ ನೆಟ್ಟಿಗರು ಮಾಹಿತಿ ನೀಡಿದ್ದಾರೆ.
ದೌಲತ್ ಕಿ ಚಾಟ್ ರೆಸ್ಟೋರೆಂಟ್‌ಗಳಲ್ಲಿ ತಿಂಡಿಗಳನ್ನು ಹೀಗೆ ನಕಲಿ ನೋಟುಗಳೊಂದಿಗೆ ಕೊಡುವ ಪದ್ಧತಿ ಇದೆ. ಇದು ಮುಕೇಶ್ ಅಂಬಾನಿ ಅವರ ಪಾರ್ಟಿಯಲ್ಲಿ 500 ರೂಪಾಯಿ ಇಟ್ಟಿದ್ದಲ್ಲ ಎಂಬುದು ಜನರಿಗೆ ಬಳಿಕ ಗೊತ್ತಾಗಿದೆ. ಆದರೂ, ತಮಾಷೆಯ ಪ್ರತಿಕ್ರಿಯೆಗಳೊಂದಿಗೆ ಜನ ವದಂತಿಯನ್ನು ಎಂಜಾಯ್ ಮಾಡಿದ್ದಾರೆ.
ಇದನ್ನೂ ಓದಿ: Fact Check Day: ಅಂತಾರಾಷ್ಟ್ರೀಯ ಫ್ಯಾಕ್ಟ್ಚೆಕ್ ದಿನ ಇಂದು; ಸುಳ್ಳು-ನಕಲಿ ಸುದ್ದಿಗಳ ಹರಡುವಿಕೆ ತಡೆಯೋಣ