ಬೆಂಗಳೂರು: ರಾಜ್ಯದಲ್ಲಿ ಸುಳ್ಯದ ಬೆಳ್ಳಾರೆಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಭುಗಿಲೆದ್ದಿರುವ ಕಾರ್ಯಕರ್ತರ ಆಕ್ರೋಶ, ನಾಯಕರ ಬೇಜವಾಬ್ದಾರಿಯುತ ಹೇಳಿಕೆ, ಚುನಾವಣೆಯ ಸಮಯ, ಸಿದ್ದರಾಮೋತ್ಸವ ಇತ್ಯಾದಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಸಂಘಟನೆಗೆ ಸಂಬಂಧಿಸಿ ಸ್ಥಳೀಯ ನಾಯಕರಿಗೆ ಟಾಸ್ಕ್‌ಗಳನ್ನು ನೀಡಿ ಹೋಗಿದ್ದಾರೆ.
ಸಿದ್ದರಾಮೋತ್ಸವ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ, ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ನಾಯಕರಿಗೆ ಶಾ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ. ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಕಾಂಗ್ರೆಸ್ ಪಕ್ಷಕ್ಕೆ ಸಿಗಬಹುದಾದ ಲಾಭದ ಲೆಕ್ಕಾಚಾರ ನಡೆಸಲಾಗಿದೆ.
ಬೃಹತ್ ಸಮಾವೇಶಕ್ಕೆ ಬಿಜೆಪಿ ಸಿದ್ಧತೆ?: ಸಿದ್ದರಾಮಯ್ಯ ಬೆಂಬಲಿಗರು ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಆ ಕಾರ್ಯಕ್ರಮವನ್ನು ಮೀರಿಸುವಂತೆ ಸಮಾವೇಶ ನಡೆಸಲು ಶಾ ಸೂಚಿಸಿದ್ದಾರೆ. ಆಗಸ್ಟ್ ಎರಡನೇ ವಾರದಿಂದ ಸಮಾವೇಶಕ್ಕೆ ಸಿದ್ದತೆ ಆರಂಭವಾಗುವ ನಿರೀಕ್ಷೆ ಇದೆ. ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆ ಸಮಾವೇಶ ನಡೆಸುವ ಸಾಧ್ಯತೆ ಇದೆ. ನಮ್ಮಲ್ಲಿ ವ್ಯಕ್ತಿ ಪೂಜೆ ಇಲ್ಲ ಪಕ್ಷ ಪೂಜೆ ಎಂಬ ಸಂದೇಶ ರವಾನೇ ಮಾಡಲು ಸೂಚಿಸಲಾಗಿದೆ. ಸರ್ಕಾರದ ಸಾಧನೆಯನ್ನು ಬಿಂಬಿಸಲು ಸಲಹೆ ನೀಡಲಾಗಿದೆ.
ರಾಜ್ಯದಲ್ಲಿ ನಡೆದ ಬೆಳವಣಿಗೆಗಳ ಬಳಿಕ ಪಕ್ಷ ಸಂಘಟನೆಗೆ ಸಮಾವೇಶದ ಅವಶ್ಯಕತೆ ಇದೆ. ಕಾರ್ಯಕರ್ತರನ್ನೂ ಒಗ್ಗೂಡಿಸಿ ಅಭಿವೃದ್ಧಿ ಮಂತ್ರ ಜಪಿಸಬೇಕಾಗಿದೆ. ಕಾರ್ಯಕರ್ತರಿಗೆ ಪಕ್ಷ ಮತ್ತು ಸರ್ಕಾರದ ಸಾಧನೆಗಳ ಪರಿಚಯ ಮಾಡಬೇಕಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಮಾವೇಶ ನಡೆಸಿ ಪಕ್ಷ ಸಂಘಟನೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಸಮಾವೇಶ ನಡೆಸುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರನ್ನೂ ಕರೆಸಲೂ ಯೋಜಿಸಲಾಗಿದೆ.