Site icon Vistara News

ʼಅಲೆಕ್ಸಾʼ ನೆರವಿನಿಂದ ಮಂಗಗಳಿಂದ ಮಗುವನ್ನು ರಕ್ಷಿಸಿದ ಬಾಲಕಿಗೆ ಆನಂದ್‌ ಮಹೀಂದ್ರಾ ಜಾಬ್‌ ಆಫರ್‌!

Anand Mahindra

Anand Mahindra offers job to Uttar Pradesh girl who foiled monkey attack using Alexa

ನವದೆಹಲಿ: ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ (Anand Mahindra) ಅವರು ದೇಶಕ್ಕಾಗಿ ಕೊಡುಗೆ ನೀಡಿದವರು, ಸಮಾಜಮುಖಿಯಾಗಿ ಕೆಲಸ ಮಾಡುವವರು, ಬಡವರಿಗೆ ಅಗತ್ಯ ನೆರವು ನೀಡುವ, ಬಹುಮಾನ ಘೋಷಣೆ ಮಾಡುವ, ತಮ್ಮ ಕಂಪನಿ ಉತ್ಪಾದಿಸುವ ಕಾರನ್ನೇ ಉಡುಗೊರೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ (Uttar Pradesh) ಅಮೆಜಾನ್‌ನ ಅಲೆಕ್ಸಾ (Alexa) ವಾಯ್ಸ್‌ ಅಸಿಸ್ಟಂಟ್‌ ಬಳಸಿ ಮಂಗಗಳ ದಾಳಿಯಿಂದ ತನ್ನನ್ನು ಹಾಗೂ ತನ್ನ ಅಕ್ಕನ ಮಗಳನ್ನು ರಕ್ಷಿಸಿದ 13 ವರ್ಷದ ಚಾಣಾಕ್ಷ ಬಾಲಕಿಗೆ ಈಗ ಆನಂದ್‌ ಮಹೀಂದ್ರಾ ಅವರು ಉದ್ಯೋಗ ನೀಡುವ ಆಫರ್‌ ಕೊಟ್ಟಿದ್ದಾರೆ.

ತಂತ್ರಜ್ಞಾನವನ್ನು ಬಳಸಿ ಮಂಗಗಳಿಂದ ಬಚಾವಾದ 13 ವರ್ಷದ ಬಾಲಕಿ ನಿಕಿತಾಗೆ ಉದ್ಯೋಗ ಕೊಡುವ ಕುರಿತು ಆನಂದ್‌ ಮಹೀಂದ್ರಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಆಧುನಿಕ ಕಾಲದಲ್ಲಿ ನಾವು ತಂತ್ರಜ್ಞಾನದ ಗುಲಾಮರಾಗುತ್ತೇವೋ ಎಂಬ ಆತಂಕ ಕಾಡುತ್ತಿದೆ. ಆದರೆ, ಈ ಬಾಲಕಿಯು ಜಗತ್ತಿನಲ್ಲಿ ಮನುಷ್ಯನ ದಕ್ಷತೆಯನ್ನು ತಂತ್ರಜ್ಞಾನವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾಳೆ” ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಬಾಲಕಿಯ ಕ್ಷಿಪ್ರ ಯೋಚನಾಶಕ್ತಿಯು ಅತ್ಯದ್ಭುತವಾಗಿದೆ. ಅನಿರೀಕ್ಷಿತ ಜಗತ್ತಿನಲ್ಲಿ ಹೇಗೆ ಯೋಚಿಸಬೇಕು, ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಈಕೆಯು ಸಾಬೀತುಪಡಿಸಿದ್ದಾಳೆ. ಈ ಬಾಲಕಿಯು ಶಿಕ್ಷಣ ಮುಗಿಸಿ, ಕಾರ್ಪೊರೇಟ್‌ ಜಗತ್ತಿಗೆ ಕಾಲಿಡಲು ತೀರ್ಮಾನಿಸಿದರೆ, ಮಹೀಂದ್ರಾ ಕಂಪನಿಯಲ್ಲಿ ಅವಳಿಗೊಂದು ಕುರ್ಚಿ ಕಾಯುತ್ತಿರುತ್ತದೆ” ಎಂಬುದಾಗಿ ಆನಂದ್‌ ಮಹೀಂದ್ರಾ ಅವರು ನಿಕಿತಾಗೆ ಉದ್ಯೋಗದ ಆಫರ್‌ ನೀಡಿದ್ದಾರೆ. ಆನಂದ್‌ ಮಹೀಂದ್ರಾ ಅವರ ಕುರಿತೂ ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಏನಿದು ನಿಕಿತಾಳ ಸಾಹಸ?

ಉತ್ತರ ಪ್ರದೇಶದ ಬಸ್ತಿಯಲ್ಲಿ ನಿಕಿತಾ ಕುಟುಂಬಸ್ಥರೊಂದಿಗೆ ವಾಸವಿದ್ದಾಳೆ. ನಿಕಿತಾ ಹಾಗೂ ಆಕೆಯ ಅಕ್ಕನ ಮಗಳು ಆಟವಾಡುತ್ತಿರುವಾಗ ಮಂಗಗಳು ಏಕಾಏಕಿ ದಾಳಿ ನಡೆಸಿವೆ. ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿವೆ. ಇನ್ನೇನು, ಮಂಗಗಳು ಪುಟ್ಟ ಕಂದಮ್ಮನ ಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲೇ ನಿಕಿತಾ ಚಾಣಾಕ್ಷತನ ಮೆರೆದಿದ್ದಾಳೆ. ಅಲೆಕ್ಸಾ, ನಾಯಿಯಂತೆ ಬೊಗಳು ಎಂಬುದಾಗಿ ನಿಕಿತಾ ಹೇಳಿದ್ದಾಳೆ. ಆಗ ಅಲೆಕ್ಸಾ ವಾಯ್ಸ್‌ ಅಸಿಸ್ಟಂಟ್‌, ನಾಯಿಯಂತೆ ಬೊಗಳಿದೆ. ಆಗ ಮಂಗಗಳು ಓಡಿ ಹೋಗಿವೆ. ಈ ಘಟನೆಯನ್ನು ನಿಕಿತಾ ಮಾಧ್ಯಮಗಳಿಗೆ ವಿವರಿಸಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಆಕೆಯ ಸಮಯಪ್ರಜ್ಞೆಯನ್ನು ಜನ ಕೊಂಡಾಡಿದ್ದಾರೆ.

ಇದನ್ನೂ ಓದಿ: Monkey attack: ಏಕಾಏಕಿ ದಾಳಿ ನಡೆಸಿದ ಮಂಗಗಳು; ಈ ಬಾಲಕಿ ಏನು ಮಾಡಿದಳು ಗೊತ್ತೇ

Exit mobile version