ನವದೆಹಲಿ: ಕೇರಳದಲ್ಲಿ 2022 ರಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಏಪ್ರಿಲ್ 16, 2022 ರಂದು ಪಾಲಕ್ಕಾಡ್ನಲ್ಲಿ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದಾಗಿನಿಂದ ಶಫೀಕ್ ತಲೆಮರೆಸಿಕೊಂಡಿದ್ದ. ಆತನನ್ನು ಕೊಲ್ಲಂ ಜಿಲ್ಲೆಯಲ್ಲಿ ಎನ್ಐಎ ತಂಡವು ಪತ್ತೆ ಮಾಡಿದೆ ಎಂದು ಅದು ಹೇಳಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಶಫೀಕ್ನನ್ನು ಭಯೋತ್ಪಾದನಾ ವಿರೋಧಿ ಸಂಸ್ಥೆ. ಸೋಮವಾರ ವಶಕ್ಕೆ ತೆಗೆದುಕೊಂಡಿದೆ ಎಂದು ಎನ್ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಶಫೀಕ್ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನ ಪ್ರಮುಖ ಸದಸ್ಯನಾಗಿದ್ದ.
ಇದನ್ನೂ ಓದಿ: Lok Sabha Election : ಶುಕ್ರವಾರ ಮತದಾನ ಬೇಡ, ಮುಸ್ಲಿಮರಿಗೆ ತೊಂದರೆಯಾಗುತ್ತದೆ; ಕಾಂಗ್ರೆಸ್ನಿಂದ ಪತ್ರ
71 ಮಂದಿಯ ಪಿತೂರಿ
ಒಟ್ಟು 71 ಜನರನ್ನು ಪಿತೂರಿಯ ಭಾಗವೆಂದು ಗುರುತಿಸಲಾಗಿದೆ. ಎನ್ಐಎ ಈಗಾಗಲೇ ಕಳೆದ ವರ್ಷ ಮಾರ್ಚ್ 17 ಮತ್ತು ನವೆಂಬರ್ 6 ರಂದು ಎರಡು ಚಾರ್ಜ್ಶೀಟ್ ಸಲ್ಲಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ಅಬ್ದುಲ್ ನಾಸರ್ ಎಂದು ಗುರುತಿಸಲಾಗಿದ್ದು, ಕಳೆದ ವರ್ಷ ಜನವರಿ 2 ರಂದು ಮೃತಪಟ್ಟಿದ್ದ. ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಾದ ಸಾಹೀರ್ ಕೆ.ವಿ ಮತ್ತು ಜಾಫರ್ ಭೀಮಂತವಿಡಾ ಅವರನ್ನು ಕ್ರಮವಾಗಿ ಕಳೆದ ವರ್ಷ ಅಕ್ಟೋಬರ್ 19 ಮತ್ತು ಫೆಬ್ರವರಿ 12 ರಂದು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿಯಾದ ಶಫೀಕ್, ಶ್ರೀನಿವಾಸನ್ ಹತ್ಯೆಗೆ ಸಂಚು ರೂಪಿಸಿದ್ದ ಪಿಎಫ್ಐನ ಪ್ರಮುಖ ಸಂಚುಕೋರನಾಗಿದ್ದ.
ತನಿಖೆಯ ಪ್ರಕಾರ, ಪಿಎಫ್ಐ ನಾಯಕತ್ವದ ನಿರ್ದೇಶನದ ಮೇರೆಗೆ ಸಂಘಟನೆಯ ಸದಸ್ಯರೊಂದಿಗೆ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಅಶ್ರಫ್ ಕೆ.ಪಿ.ಗೆ ಶಫೀಖ್ ಆಶ್ರಯ ನೀಡಿದ್ದ ಎಂದು ಎನ್ಐಎ ತಿಳಿಸಿದೆ.