ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ನಿರಾಕರಿಸಿ ಆರು ದಿನ ಎಸ್ಐಟಿ ವಶಕ್ಕೆ ನೀಡಿದ ಬೆನ್ನಲ್ಲೇ ಅವರ ತಾಯಿ ಭವಾನಿ ಅವರಿಗೆ ಆಘಾತ ಎದುರಾಗಿದೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾಗೊಂಡಿರುವ ಕಾರಣ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆಗಳಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಪೊಲೀಸರು ಭವಾನಿ ಅವರಿಗೆ ತನಿಖೆಗೆ ಹಾಜರಾಗುವಂತೆ 15 ದಿನಗಳ ಹಿಂದೆ ನೋಟಿಸ್ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸದ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಏತನ್ಮಧ್ಯೆ ಶುಕ್ರವಾರ ಬೆಳಗ್ಗೆ ಎಸ್ಐಟಿ ಅಧಿಕಾರಿಗಳೂ ಭವಾನಿ ಅವರಿಗೆ ಎರಡನೇ ನೋಟಿಸ್ ನೀಡಿದ್ದರು. ಅವರು ಮನೆಯಲ್ಲಿ ಇಲ್ಲದ ಕಾರಣ ನೋಟಿಸ್ ಅಂಟಿಸಿ ಬಂದಿದ್ದರು. ಇದೀಗ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಮೇ 29ರಂದು ಈ ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರವರೆಗೆ ತೀರ್ಪು ಕಾಯ್ದಿರಿಸಿತ್ತು. ಹಾಗಾಗಿ, ಮೇ 31 ತಾಯಿ-ಮಗನಿಗೆ ಪ್ರಮುಖ ದಿನವಾಗಿದೆ. ಅತ್ತ, ತಮ್ಮ ವಿರುದ್ಧ ದಾಖಲಾದ ಎರಡೂ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್.ಡಿ.ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ವಿಚಾರಣೆ ವೇಳೆ ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ, “ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು” ಎಂದರು.
ಎಸ್‌ಪಿಪಿ ವಾದವೇನಿತ್ತು?
ಮಗನ ರಕ್ಷಣೆಗಾಗಿ ಭವಾನಿ ರೇವಣ್ಣ ಒಳಸಂಚು ರೂಪಿಸಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣದ ಹಿಂದೆ ಇವರ ಕೈವಾಡವಿದೆ. ಸಂತ್ರಸ್ತ ಮಹಿಳೆಗೆ ಊಟ ನೀರು, ಸರಿಯಾಗಿ ಕೊಟ್ಟಿಲ್ಲ. ಆಕೆಗೆ ಬಟ್ಟೆ ಸೀರೆಯನ್ನು ಕೊಟ್ಟಿಲ್ಲ. ಆರೋಪಿ ಸತೀಶ್ ಬಾಬಣ್ಣ ಜತೆ ಭವಾನಿ ಮಾತನಾಡಿದ್ದಾರೆ. ಆರೋಪಿ ಸತೀಶ್ ಬಾಬಣ್ಣ ಕೇಳಿದಾಗ ಭವಾನಿಯವರು ಆಯ್ತು 150 ರೂಪಾಯಿ ಅಥವಾ 200 ರೂಪಾಯಿ ಸೀರೆ ಕೊಡ್ಸು ಎಂಬುದಾಗಿ ಸೂಚಿಸಿದ್ದಾರೆ” ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಕೊನೆಗೆ ನ್ಯಾಯಾಲಯವು ತೀರ್ಪನ್ನು ಮೇ 31ರವರೆಗೆ ಕಾಯ್ದಿರಿಸಿತ್ತು.
ಇದನ್ನೂ ಓದಿ: Prajwal Revanna : ನನ್ನ ತೇಜೋವಧೆಯಾಗಿದೆ; ಪ್ರತಿ ದೂರು ನೀಡಲು ಪ್ರಜ್ವಲ್ ರೇವಣ್ಣ ಸಿದ್ಧತೆ
ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್‘
ಪ್ರಜ್ವಲ್ ರೇವಣ್ಣ ಅವರು ಮೇ 31ರಂದು ಭಾರತಕ್ಕೆ ಆಗಮಿಸಲಿದ್ದು, ನಾಳೆ ಅಂದರೆ ಮೇ 30ರಂದೇ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ವಕೀಲ ಅರುಣ್ ಮನವಿ ಮಾಡಿದ್ದರು. ಆದರೆ, 39ರಂದೇ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ಈ ಕುರಿತು ಪ್ರತಿಕ್ರಿಯಿಸುವಂತೆ ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿದೆ. ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಮೂರೂ ಪ್ರಕರಣಗಳಲ್ಲಿ ಎಸ್‌ಐಟಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕು. ಹಾಗಾಗಿ, ಮೇ 31ರಂದು ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿತು.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ನವೀನ್ ಗೌಡ, ಎಚ್.ಪಿ. ಪುಟ್ಟರಾಜು, ಕಾರ್ತಿಕ್ ಹಾಗೂ ಚೇತನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜೂನ್ 3 ಕ್ಕೆ ಮುಂದೂಡಲಾಗಿದೆ.