Site icon Vistara News

Arvind Kejriwal : ನನಗೆ ಬಿಜೆಪಿ ಸೇರಲು ಒತ್ತಡ ಹೇರುತ್ತಿದ್ದಾರೆ; ಡೆಲ್ಲಿ ಸಿಎಂ ಅಳಲು

Aravinda Kejriwal

ನವದೆಹಲಿ: ತಮ್ಮನ್ನು ಬಿಜೆಪಿಗೆ ಸೇರಲು ಒತ್ತಾಯಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಭಾನುವಾರ ಹೇಳಿದ್ದಾರೆ. ಆಮ್​ ಆದ್ಮಿ ಪಕ್ಷದ ಮುಖಂಡರಿಗೆ ಡೆಲ್ಲಿ ಪೊಲೀಸರು ನೋಟಿಸ್ ನೀಡಿರುವ ಬೆನ್ನಲ್ಲೇ ಅವು ಈ ರೀತಿ ಹೇಳಿಕೆ ನೀಡಿದ್ದಾರೆ.

“ಅವರು ನಮ್ಮ ವಿರುದ್ಧ ಯಾವುದೇ ಪಿತೂರಿ ನಡೆಸಬಹುದು. ನಾನು ಕೂಡ ದೃಢವಾಗಿದ್ದೇನೆ. ನಾನು ಬಗ್ಗುವುದಿಲ್ಲ. . ಅವರು ನನ್ನನ್ನು ಬಿಜೆಪಿಗೆ ಸೇರಲು ಕೇಳುತ್ತಿದ್ದಾರೆ. ಅದಾದ ಬಳಿಕ ಅವರು ನನ್ನನ್ನು ಒಬ್ಬಂಟಿಯಾಗಿ ಬಿಡಲು ಹೊರಟಿದ್ದಾರೆ. ಆದರೆ ನಾನು ಎಂದಿಗೂ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದೆ, ನಾನು ಎಂದಿಗೂ ಬಿಜೆಪಿಗೆ ಸೇರುವುದಿಲ್ಲ ಎಂದು ಈಗಲೂ ಹೇಳುತ್ತೇನೆ ” ಎಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದ ಶಾಲೆಯೊಂದರ ಶಂಕುಸ್ಥಾಪನೆ ಬಳಿಕ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಬಜೆಟ್​ನ ಶೇಕಡಾ 4 ರಷ್ಟು ಮಾತ್ರ ಶಾಲೆಗಳು ಮತ್ತು ಆಸ್ಪತ್ರೆಗಳಿಗಾಗಿ ಖರ್ಚು ಮಾಡುತ್ತದೆ/ ಆದರೆ ದೆಹಲಿ ಸರ್ಕಾರವು ಪ್ರತಿವರ್ಷ ತನ್ನ ಬಜೆಟ್​ನ 40 ಪ್ರತಿಶತವನ್ನು ಅವುಗಳಿಗಾಗಿ ಖರ್ಚು ಮಾಡುತ್ತದೆ ಎಂದು ಹೇಳಿದರು. ಜೈಲಿನಲ್ಲಿರುವ ಎಎಪಿ ಸಹೋದ್ಯೋಗಿಗಳಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನೂ ದೆಹಲಿ ಮುಖ್ಯಮಂತ್ರಿ ಇದೇ ವೇಳೆ ಉಲ್ಲೇಖಿಸಿದರು.

ಇದನ್ನೂ ಓದಿ : BBC: ರಾಮ ಮಂದಿರ ಬಗ್ಗೆ ಬಿಬಿಸಿಯ ಅಸ್ಪಷ್ಟ ವರದಿ; ಬ್ರಿಟನ್‌ ಸಂಸತ್ತಿನಲ್ಲಿ ಛೀಮಾರಿ

“ಇಂದು ಎಲ್ಲಾ ತನಿಖೆ ಸಂಸ್ಥೆಗಳು ನಮ್ಮ ಹಿಂದೆ ಬಿದ್ದಿವೆ ಮನೀಶ್ ಸಿಸೋಡಿಯಾ ಅವರ ತಪ್ಪು ಅವರು ಉತ್ತಮ ಶಾಲೆಗಳನ್ನು ನಿರ್ಮಿಸುತ್ತಿದ್ದಾರೆ ಎಂಬುದು. ಸತ್ಯೇಂದರ್ ಜೈನ್ ಅವರ ತಪ್ಪು ಏನೆಂದರೆ ಅವರು ಉತ್ತಮ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್ ಗಳನ್ನು ನಿರ್ಮಿಸುತ್ತಿದ್ದರು. ಮನೀಶ್ ಸಿಸೋಡಿಯಾ ಅವರು ಶಾಲಾ ಮೂಲಸೌಕರ್ಯಗಳ ಸುಧಾರಣೆಗಾಗಿ ಕೆಲಸ ಮಾಡದಿದ್ದರೆ ಅವರನ್ನು ಬಂಧಿಸುತ್ತಿರಲಿಲ್ಲ. ಬಿಜೆಪಿಯವರು ಎಲ್ಲಾ ರೀತಿಯ ಪಿತೂರಿಗಳನ್ನು ಮಾಡಿದರು , ಆದರೆ ನಮ್ಮನ್ನು ತಡೆಯಲು ಸಾಧ್ಯವಾಗಲಿಲ್ಲ” ಎಂದು ಅರವಿಂದ್ ಕೇಜ್ರಿವಾಲ್​ ಹೇಳಿದರು.

ಎಎಪಿ ಮುಖ್ಯಸ್ಥರು ಅಲ್ಲಿ ಹಾಜರಿದ್ದ ಜನರಿಗೆ ತಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಮುಂದುವರಿಸುವಂತೆ ಕೇಳಿಕೊಂಡರು.

ದೆಹಲಿ ಪೊಲೀಸರು ಭಾನುವಾರ ಎಎಪಿ ಸಚಿವೆ ಅತಿಶಿ ಅವರ ಮನೆಗೆ ತೆರಳಿ ನೋಟಿಸ್ ನೀಡಿದ ಕೆಲವೇ ಗಂಟೆಗಳ ನಂತರ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ಬಂದಿದೆ. ಆಪ್​ನ ಏಳು ಶಾಸಕರನ್ನು ಕೊಳ್ಳುವುದಕ್ಕೆ ಬಿಜೆಪಿ ಪ್ರಯತ್ನಿಸಿದೆ ಎಂದು ಇದೇ ವೇಳೆ ಕೇಜ್ರಿವಾಲ್ ಹೇಳಿದ್ದಾರೆ.

ಅತಿಶಿ ಮನೆಯಲ್ಲಿ ಇಲ್ಲದ ಕಾರಣ ದೆಹಲಿ ಶಿಕ್ಷಣ ಸಚಿವರ ವಿಶೇಷ ಕರ್ತವ್ಯದ ಅಧಿಕಾರಿ (ಒಎಸ್ಡಿ) ನೋಟಿಸ್ ಸ್ವೀಕರಿಸಿದ್ದಾರೆ. ಸೋಮವಾರ (ಫೆಬ್ರವರಿ 5) ರೊಳಗೆ ನೋಟಿಸ್​ಗೆ ಉತ್ತರಿಸುವಂತೆ ಅತಿಶಿಗೆ ಸೂಚಿಸಲಾಗಿದೆ.

ತಮ್ಮ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಕ್ಕೆ ಯತ್ನಿಸಲಾಗುತ್ತದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರಿಗೂ ನೋಟಿಸ್ ನೀಡಲಾಗಿದೆ. ಶನಿವಾರ, ಐದು ಗಂಟೆಗಳ ನಾಟಕದ ನಂತರ ದೆಹಲಿ ಪೊಲೀಸ್ ಅಪರಾಧ ವಿಭಾಗವು ಮುಖ್ಯಮಂತ್ರಿಗೆ ನೋಟಿಸ್ ನೀಡಿದೆ. ಆರೋಪಗಳ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಮತ್ತು ಬಿಜೆಪಿ ಸಂಪರ್ಕಿಸಿದೆ ಎಂದು ಹೇಳಲಾದ ಎಎಪಿ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವಂತೆ ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರನ್ನು ಕೇಳಿದ್ದಾರೆ.

Exit mobile version