Site icon Vistara News

Asia Cup 2024 : ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

Asia Cup 2024

ನವದೆಹಲಿ: 2024ರ ಆವೃತ್ತಿಯ ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್​ ಟೂರ್ನಿಗೆ (Asia Cup 2024) ಭಾರತ ತಂಡವನ್ನು ಶನಿವಾರ (ಜುಲೈ 6) ಪ್ರಕಟಿಸಿದೆ. ಪಂದ್ಯಾವಳಿ ಜುಲೈ 19 ರಿಂದ 28 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ. ಮಹಿಳಾ ಏಷ್ಯಾಕಪ್​​ನ ಒಂಬತ್ತನೇ ಆವೃತ್ತಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಭಾರತ ಹಾಲಿ ಚಾಂಪಿಯನ್ ಆಗಿದ್ದು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಕಳೆದ ಆವೃತ್ತಿಯ ಫೈನಲ್​​ನಲ್ಲಿ ಭಾರತ ಬಾಂಗ್ಲಾದೇಶವನ್ನು 8 ವಿಕೆಟ್​ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಭಾರತ ತಂಡ ಮುಂಬರುವ ಆವೃತ್ತಿಯಲ್ಲೂ ಗೆಲುವಿನ ನೆಚ್ಚಿನ ತಂಡವಾಗಿದೆ.

ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಮಲೇಷ್ಯಾ, ಥೈಲ್ಯಾಂಡ್, ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ‘ಎ’ ಗುಂಪಿನಲ್ಲಿ ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳೊಂದಿಗೆ ಸ್ಥಾನ ಪಡೆದಿದೆ.

2024ರ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ತಂಡವನ್ನು ಹರ್ಮನ್​ಪ್ರೀತ್​ ಕೌರ್ ಮುನ್ನಡೆಸಲಿದ್ದಾರೆ. ಈ ವಾರದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ 20 ಪಂದ್ಯದ ಸಮಯದಲ್ಲಿ ಗಾಯಗೊಂಡ ರಿಚಾ ಘೋಷ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡುತ್ತಿರುವ ತಂಡದಿಂದ ಇಬ್ಬರು ಆಟಗಾರ್ತಿಯರನ್ನು ಕೈಬಿಡಲಾಗಿದೆ. ಅಮನ್ಜೋತ್ ಕೌರ್ ಮತ್ತು ಶಬ್ನಮ್​ ಮೊಹಮ್ಮದ್ ಶಕೀಲ್ ಅವಕಾಶ ಪಡೆದಿದ್ದಾರೆ. ಹರ್ಮನ್ ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದು, ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ.

ಇದನ್ನೂ ಓದಿ: ZIM vs IND : ಜಿಂಬಾಬ್ವೆ ವಿರುದ್ಧ 13 ರನ್​ಗಳಿಂದ ಸೋತ ವಿಶ್ವ ವಿಜೇತ ಭಾರತ ತಂಡ

ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್ ಮತ್ತು ಮೇಘನಾ ಸಿಂಗ್ ಎಂಬ ನಾಲ್ವರು ಮೀಸಲು ಆಟಗಾರರನ್ನು ಆಯ್ಕೆದಾರರು ಹೆಸರಿಸಿದ್ದಾರೆ. ಭಾರತ ತಂಡ ಜುಲೈ 19ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜುಲೈ 21 ಮತ್ತು 23ರಂದು ಕ್ರಮವಾಗಿ ಯುಎಇ ಮತ್ತು ನೇಪಾಳ ವಿರುದ್ಧ ಸೆಣಸಲಿದೆ.

ಭಾರತ ತಂಡ:

ಹರ್ಮನ್​​ಪ್ರೀತ್​ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಂಕಾ ಪಾಟೀಲ್, ಸಜನಾ ಸಜೀವನ್.

ಮೀಸಲು ಆಟಗಾರರು: ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್, ಮೇಘನಾ ಸಿಂಗ್

ಮಹಿಳಾ ಏಷ್ಯಾಕಪ್ ಟಿ20 ವಿಶ್ವಕಪ್ 2024ರ ವೇಳಾಪಟ್ಟಿ

ಜುಲೈ19ರಂದು , ಭಾರತ-ಪಾಕಿಸ್ತಾನ, ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ, ಡಂಬುಲ್ಲಾ
ಜುಲೈ 21ರಂದು, ಭಾರತ-ಯುಎಇ, ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ, ಡಂಬುಲ್ಲಾ
ಜುಲೈ 23 ರಂದು , ಭಾರತ-ನೇಪಾಳ, ರಣಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ, ಡಂಬುಲ್ಲಾ

Exit mobile version