Site icon Vistara News

Asia Team Championships: ಐತಿಹಾಸಿಕ ಚಿನ್ನ ಗೆದ್ದ ಭಾರತದ ಮಹಿಳಾ ಬ್ಯಾಡ್ಮಿಂಟನ್‌ ತಂಡ

Badminton Asia Team Championships

ಶಾ ಆಲಂ (ಮಲೇಷ್ಯಾ): ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ(Asia Team Championships) ಭಾರತದ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಟೂರ್ನಿಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ್ದ ಪಿ.ವಿ. ಸಿಂಧು ಸಾರಥ್ಯದ ಮಹಿಳಾ ತಂಡ ಭಾನುವಾರ ನಡೆದ ಫೈನಲ್​ನಲ್ಲಿ ಥಾಯ್ಲೆಂಡ್‌ ವಿರುದ್ಧ 3-2 ಅಂತರದಿಂದ ಗೆದ್ದು ಈ ಸಾಧನೆ ಮಾಡಿದೆ. 2016 ಮತ್ತು 2020ರಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕ ಜಯಿಸಿತ್ತು. ಇದೀಗ ಮಹಿಳೆಯರು ಚಾರಿತ್ರಿಕ ಚಿನ್ನದ ಪದಕದಿಂದ ಮಿನುಗಿದ್ದಾರೆ.

ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಭಾರತ 2 ಬಾರಿಯ ಮಾಜಿ ಚಾಂಪಿಯನ್‌ ಜಪಾನ್‌ ವಿರುದ್ಧ 3-2 ಅಂತರದ ರೋಚಕ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತ್ತು. ಫೈನಲ್​ನಲ್ಲಿಯೂ ಇದೇ ಪ್ರದರ್ಶನವನ್ನು ತೋರುವ ಮೂಲಕ ಚೊಚ್ಚಲ ಪದಕ ತನ್ನಾಗಿಸಿಕೊಂಡಿತು.

ಸಿಂಗಲ್ಸ್​ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಸಿಂಧು ಅವರು ಸುಪಾನಿಡಾ ಕಟೆಥಾಂಗ್ ಅವರನ್ನು 21-12, 21-12 ರಿಂದ ಸೋಲಿಸಿ ಭಾರತಕ್ಕೆ ಶುಭಾರಂಭ ಒದಗಿಸಿದರು. ಇದಾದ ಬಳಿಕ  ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ಡಬಲ್ಸ್​ನಲ್ಲಿ 21-16, 18-21, 21-16 ಅಂತರದಲ್ಲಿ ಜೊಂಗ್‌ಕೋಲ್ಫಾನ್ ಕಿಟಿತರಕುಲ್ ಮತ್ತು ರವಿಂದ ಜೊಂಗ್‌ಜೈ ವಿರುದ್ಧ ಗೆದ್ದು 2-1 ಮುನ್ನಡೆ ತಂದುಕೊಟ್ಟರು.

ಮೂರನೇ ಪಂದ್ಯದಲ್ಲಿ ಆಡಲಿಳಿದ ಅಶ್ಮಿತಾ ಚಾಲಿಹಾ ಸಿಂಗಲ್ಸ್​ ವಿಭಾಗದಲ್ಲಿ 11-21, 14-21 ನೇರ ಗೇಮ್​ಗಳಿಂದ ಬುಸಾನನ್ ಒಂಗ್ಬಮ್ರುಂಗ್ಫಾನ್ ವಿರುದ್ಧ ಸೋಲು ಕಂಡರು. ಈ ಗೆಲುವಿನೊಂದಿಗೆ ಥಾಯ್ಲೆಂಡ್‌ ಖಾತೆ ತೆರೆಯಿತು. ಈ ಪಂದ್ಯ ಗೆಲ್ಲುತ್ತಿದ್ದರೆ ಭಾರತ ಇನ್ನೆರಡು ಪಂದ್ಯ ಬಾಕಿ ಇರುವಂತೆಯೇ ಚಿನ್ನದ ಪದಕ ಗೆಲ್ಲಬಹುದಿತ್ತು.

ಇದನ್ನೂ ಓದಿ Sachin Tendulkar: ಪುಲ್ವಾಮಾದ ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ ತೆಂಡೂಲ್ಕರ್

ಮೂರನೇ ಪಂದ್ಯದಲ್ಲಿ ಸೋಲು ಕಂಡ ಭಾರತ ನಾಲ್ಕನೇ ಪಂದ್ಯದಲ್ಲಿಯೂ ಸೋಲಿಗೆ ತುತ್ತಾಯಿತು. ಡಬಲ್ಸ್​ ವಿಭಾಗದ ಈ ಪಂದ್ಯಲ್ಲಿ ಪ್ರಿಯಾ ಕೊಂಜೆಂಗ್‌ಬಾಮ್ ಮತ್ತು ಶ್ರುತಿ ಮಿಶ್ರಾ ಜೋಡಿ 11-21, 9-21 ರಿಂದ ಬೆನ್ಯಾಪಾ ಐಮ್‌ಸಾರ್ಡ್ ಮತ್ತು ನುಂಟಕರ್ನ್ ಐಮ್‌ಸಾರ್ಡ್ ವಿರುದ್ಧ ಸೋತರು. ಈ ಸೋಲಿನೊಂದಿಗೆ ಪಂದ್ಯ 2-2 ಸಮಬಲ ಸಾಧಿಸಿತು.

ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಆಡಲಿಳಿದ ಭಾರತದ 17ರ ಹರೆಯದ ಅನ್ಮೋಲ್‌ ಖರಬ್‌ ಅವರು ಪೋರ್ನ್‌ಪಿಚಾ ಚೋಯಿಕೀವಾಂಗ್ ಅವರನ್ನು 21-14, 21-9 ನೇರ ಗೇಮ್​ಗಳಿಂದ ಮಣಿಸಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆಲ್ಲಿಸಿ ಕೊಟ್ಟರು. ಕಳೆದ ಸೆಮಿಫೈನಲ್​ ಪಂದ್ಯದಲ್ಲಿಯೂ ಕೂಡ ಅವರು ಇದೇ ರೀತಿಯ ತೀವ್ರ ಪೈಪೋಟಿಯಿಂದ ಕೂಡಿದ ನಿರ್ಣಾಯಕ ಪಂದ್ಯ ಗೆದ್ದು ಭಾರತಕ್ಕೆ ಫೈನಲ್ ಟಿಕೆಟ್​ ಕೊಡಿಸಿದ್ದರು. ಇದೀಗ ಫೈನಲ್​ನಲ್ಲಿಯೂ ಅಮೋಘ ಪ್ರದರ್ಶನದ ಮೂಲಕ ಪದಕ ತಂದು ಕೊಟ್ಟಿದ್ದಾರೆ.

Exit mobile version