ಗುವಾಹಟಿ: ಇಲ್ಲಿನ ಶಾಲೆಯೊಂದರ ಶಿಕ್ಷಕ ಶಾಲೆಯಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಲೈಂಗಿಕ ಕಿರುಕುಳ (Physical assault) ನೀಡುತ್ತಿದ್ದ ಬಗ್ಗೆ ದೂರು ದಾಖಲಾಗಿದೆ. ಪ್ರಕರಣ ಬಯಲಿಗೆ ಬಂದ ತಕ್ಷಣ ಗ್ರಾಮಸ್ಥರು ಶಾಲೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನಡೆದಿದೆ. ಶಿಕ್ಷಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಗೆ ಬೆಂಕಿ ಹಚ್ಚಿದ್ದಕ್ಕಾಗಿ ಸ್ಥಳೀಯರು ಸಹ ಪೊಲೀಸ್ ಪ್ರಕರಣವನ್ನು ಎದುರಿಸುವಂತಾಗಿದೆ.
ಘಟನೆ ಬಳಿಕ 37 ವರ್ಷದ ಶಿಕ್ಷಕ ಪರಾರಿಯಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಆಗಸ್ಟ್ 12 ರಂದು ನಡೆದಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಪೊಲೀಸರು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಕರೀಂಗಂಜ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪಾರ್ಥ ಪ್ರತಿಮ್ ದಾಸ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೇಳಲು ಆರಂಭದಲ್ಲಿ ಮಕ್ಕಳು ಹಿಂಜರಿಯುತ್ತಿದ್ದರು. ಆದರೆ ನಂತರ ಬಾಲಕಿಯೊಬ್ಬಳು ತನ್ನ ತಾಯಿಗೆ ವಿಷಯ ತಿಳಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ಆ ಸುದ್ದಿ ಎಲ್ಲೆಡೆ ಹರಿಡಿದ್ದು ಸಿಟ್ಟಿಗೆದ್ದ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ
“ಅಶ್ಲೀಲ ಚಿತ್ರಗಳನ್ನು ನೋಡುವಂತೆ ಶಿಕ್ಷಕರು ಬಲವಂತಪಡಿಸಿದ್ದಾರೆ ಎಂದು ಅವಳು ಹೇಳಿದ್ದಳು. ವಿಡಿಯೊ ತೋರಿಸಿದ ಬಳಿಕ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದ” ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು. ಕೋಪಗೊಂಡ ಸ್ಥಳೀಯರು ಶಿಕ್ಷಕನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅವನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಎಸ್ಪಿ ಹೇಳಿದ್ದಾರೆ.
“ಸ್ಥಳೀಯರು ಸರ್ಕಾರಿ ಆಸ್ತಿಗೆ ಹಾನಿ ಮಾಡಿರುವುದರಿಂದ, ನಾವು ಅವರ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
“ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಇದರಿಂದ ಅವರು ಶಿಕ್ಷಣವನ್ನು ಪಡೆಯುತ್ತಾರೆ ಮತ್ತು ಉತ್ತಮ ಮಾನವರಾಗುತ್ತಾರೆ ಎಂದುಕೊಂಡಿದ್ದೆವು. ಆದರೆ ಈ ರೀತಿಯ ಶಿಕ್ಷಕರಿಂದ ಅವರು ಏನು ಕಲಿಯುತ್ತಾರೆ” ಎಂದು ಸ್ಥಳೀಯರೊಬ್ಬರು ಹೇಳಿದರು.