ಸಿಲ್ಚಾರ್: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ವಿರುದ್ಧ ಕಿರುಕುಳದ ಆರೋಪ ಮಾಡಿದ ನಂತರ ಕಳೆದ ವರ್ಷ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಅಸ್ಸಾಂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅಂಕಿತಾ ದತ್ತಾ (Angkith Dutta) ಭಾನುವಾರ ಪ್ರತಿಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಲು ಸಜ್ಜಾಗಿದ್ದಾರೆ. 100ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಭಾನುವಾರ ಗುವಾಹಟಿಯಲ್ಲಿ ಬಿಜೆಪಿಗೆ ಸೇರುವುದಾಗಿ ದತ್ತಾ ಶನಿವಾರ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವರದಿಯನ್ನು ದೃಢಪಡಿಸಿದ್ದಾರೆ. ಪ್ರತಿಭಾವಂತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
“ವೈದ್ಯರು, ಎಂಜಿನಿಯರ್ಗಳು ಐಟಿ ವೃತ್ತಿಪರರು ಮತ್ತು ಇತರ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆದ ಯುವಕರು ನಮ್ಮ ಪಕ್ಷಕ್ಕೆ ಸೇರಬೇಕೆಂದು ನಾವು ಬಯಸುತ್ತೇವೆ. ನಾವು ಅನೇಕ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿದ್ದೇವೆ ಮತ್ತು ಈ ಯುವಕರು ಅವುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ನಮಗೆ ಸಹಾಯ ಮಾಡುತ್ತಾರೆ. ನಾಳೆ, ಅನೇಕ ಪ್ರತಿಭಾವಂತ ಯುವಕರು ಬಿಜೆಪಿಗೆ ಸೇರುತ್ತಾರೆ” ಎಂದು ಶರ್ಮಾ ಶನಿವಾರ ಹೇಳಿದ್ದರು.
ಶ್ರೀನಿವಾಸ್ ಬಂಧನವಾಗಿತ್ತು
ಕಳೆದ ವರ್ಷ ಏಪ್ರಿಲ್ 22ರಂದು ದತ್ತಾ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಯುವ ಕಾಂಗ್ರೆಸ್ ಮುಖ್ಯಸ್ಥರು ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎಂದು ದತ್ತಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಅಲ್ಲದೆ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, 2024ರ ಮೇ 17ರಂದು ಸುಪ್ರೀಂ ಕೋರ್ಟ್ ಶ್ರೀನಿವಾಸ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವ ಮೂಲಕ ಬಂಧನದಿಂದ ಮಧ್ಯಂತರ ಪರಿಹಾರ ನೀಡಿತ್ತು
ಅಸ್ಸಾಂ ಮುಖ್ಯಮಂತ್ರಿಯ ಪ್ರಭಾವದಿಂದ ದತ್ತಾ ದೂರು ದಾಖಲಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತ್ಯುತ್ತರ ನೀಡಿದ್ದರು. ಅವರು ನಮ್ಮ ಪಕ್ಷದ ದಕ್ಷ ನಾಯಕಿಯಾಗಿದ್ದರು. ಆದರೆ ಅವರು ತುಂಬಾ ಭಾವುಕರಾಗಿದ್ದಾರೆ. ಈ ವಿಷಯವನ್ನು ಪಕ್ಷದೊಳಗೆ ಪರಿಹರಿಸಬಹುದಿತ್ತು. ಆದರೆ ಹಿಮಂತ ಮಧ್ಯಪ್ರವೇಶಿಸಿ ಅದನ್ನು ಕಾನೂನು ಸಮಸ್ಯೆಯನ್ನಾಗಿ ಮಾಡಿದರು” ಎಂದು ಅವರು ಹೇಳಿದ್ದರು.
ಇದನ್ನೂ ಓದಿ : Nitish Kumar: ಆರ್‌ಜೆಡಿ ಮೈತ್ರಿ ಪತನ; ಸಿಎಂ ಸ್ಥಾನಕ್ಕೆ ನಿತೀಶ್ ರಾಜೀನಾಮೆ, ಬಿಜೆಪಿ ಜತೆ ಭಾಯಿ ಭಾಯಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಲ್ಲಿ, ನಾನು ಅವರನ್ನು ಭೇಟಿಯಾಗಲು ಪ್ರಯತ್ನಿಸಿದೆ. ಆದರೆ ಪಕ್ಷವು ಅವಕಾಶ ನೀಡಲಿಲ್ಲ ಎಂದು ದತ್ತಾ ದೂರಿದ್ದರು “ನಾನು ಮಾತ್ರವಲ್ಲ, ರಾಹುಲ್ ಗಾಂಧಿ ತಮ್ಮ ಯಾತ್ರೆಯ ಸಮಯದಲ್ಲಿ ಸಭೆ ಮಾಡಲು ನಿರಾಕರಿಸುವ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ” ಎಂದು ದತ್ತಾ ದೂರಿದ್ದಾರೆ. ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಲಾಯಿತು. ಪಕ್ಷದ ಹಿರಿಯ ನಾಯಕರ ಪ್ರತಿಕ್ರಿಯೆಗಾಗಿ 10 ತಿಂಗಳು ಕಾಯುತ್ತಿದ್ದೆ ಎಂದು ಅಂಕಿತಾ ಹೇಳಿದ್ದಾರೆ
ಬೇರೆ ಪಕ್ಷ ಸೇರಿರಲಿಲ್ಲ
ನಾನು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲಿಲ್ಲ. ರಾಹುಲ್ ಗಾಂಧಿ ಮತ್ತು ಇತರ ನಾಯಕರು ನನಗೆ ನ್ಯಾಯ ಒದಗಿಸುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅಸ್ಸಾಂನಲ್ಲಿ ಯಾತ್ರೆಯ ಸಮಯದಲ್ಲಿ ಅವರು ನನ್ನನ್ನು ಭೇಟಿಯಾಗಲು ನಿರಾಕರಿಸಿದಾಗ ನನಗೆ ಬೇಸರವಾಯಿತು ಎಂದು ದತ್ತಾ ಹೇಳಿಕೊಂಡಿದ್ದಾರೆ.
ನಾನು ಬಿಜೆಪಿಯಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ. ಸಿಎಂ ಶರ್ಮಾ ಮಾತ್ರ ನನ್ನನ್ನು ಬೆಂಬಲಿಸಿ ಧ್ವನಿ ಎತ್ತಿದರು. ನಾನು ನರಳುತ್ತಿದ್ದಾಗ ಮತ್ತು ಕಿರುಕುಳ ವಿರುದ್ಧ ಮಾತನಾಡಿದಾಗ, ಇಡೀ ಕಾಂಗ್ರೆಸ್ ನಾಯಕತ್ವವು ಮೌನವಾಗಿತ್ತು. ಆ ಸಮಯದಲ್ಲಿ, ಹಿಮಂತ ಅವರು ಮತ್ತೊಂದು ಪಕ್ಷದ ಸದಸ್ಯರಾಗಿದ್ದರೂ ನನ್ನೊಂದಿಗೆ ನಿಂತರು ಎಂದು ದತ್ತಾ ಹೇಳಿಕೊಂಡಿದ್ದಾರೆ.
ಅಂಕಿತಾ ಅವರಲ್ಲದೆ, ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಬಿಸ್ಮಿತಾ ಗೊಗೊಯ್ ಕೂಡ ಭಾನುವಾರ ಬಿಜೆಪಿಗೆ ಸೇರುವ ಸಾಧ್ಯತೆಯಿದೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಆಡಳಿತದಲ್ಲಿ ಗೊಗೊಯ್ ಸಾಂಸ್ಕೃತಿಕ ವ್ಯವಹಾರಗಳು, ಕೈಮಗ್ಗ ಮತ್ತು ಜವಳಿ ಖಾತೆ ರಾಜ್ಯ ಸಚಿವರಾಗಿದ್ದರು. ಅವರು 2021 ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.
ದತ್ತಾ ಇನ್ನು ಮುಂದೆ ಕಾಂಗ್ರೆಸ್ನ ಭಾಗವಾಗಿಲ್ಲ. ಆದ್ದರಿಂದ ಅವರು ಬಿಜೆಪಿ ಅಥವಾ ಬೇರೆ ಯಾವುದೇ ಪಕ್ಷಕ್ಕೆ ಸೇರಿದರೆ ಅವರು ಚಿಂತಿಸುವುದಿಲ್ಲ ಎಂದು ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಶನಿವಾರ ಹೇಳಿದ್ದಾರೆ.