ಡಬ್ಲಿನ್, : ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Babar Azam) ಹೊಸ ದಾಖಲೆ ಬರೆದಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ 20 ಐ ಸರಣಿಯ ಆರಂಭಿಕ ಪಂದ್ಯದಲ್ಲಿ ಬಾಬರ್ ಅರ್ಧಶತಕ ಬಾರಿಸಿ ವಿರಾಟ್ ಕೊಹ್ಲಿಯಿರುವ ಎಲೈಟ್ ಗುಂಪಿಗೆ ಸೇರಿದರು. ಪಾಕಿಸ್ತಾನದ ಬಲಗೈ ಬ್ಯಾಟರ್ ಟಿ 20 ಕ್ರಿಕೆಟ್ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ಗಳಿಸಿದ ವಿಶ್ವದ ನಾಲ್ಕನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (110), ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ (110) ಮತ್ತು ವಿರಾಟ್ ಕೊಹ್ಲಿ (105) ಟಿ20 ಕ್ರಿಕೆಟ್ನಲ್ಲಿ 100ಕ್ಕೂ ಹೆಚ್ಚು ಬಾರಿ 50+ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದರು.
296 ಟಿ 20 ಪಂದ್ಯಗಳಲ್ಲಿ 89 ಅರ್ಧಶತಕಗಳು ಮತ್ತು 11 ಶತಕಗಳ ಪ್ರಭಾವಶಾಲಿ ದಾಖಲೆಯೊಂದಿಗೆ, ಬಾಬರ್ 100 50+ ಸ್ಕೋರ್ಗಳ ಮೈಲಿಗಲ್ಲನ್ನು ಸಾಧಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಐರ್ಲೆಂಡ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಬಾಬರ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 38 ಅರ್ಧಶತಕಗಳನ್ನು ಬಾರಿಸಿದ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದರು.
ಇದನ್ನೂ ಓದಿ: IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್ಮನ್ ಗಿಲ್ಗೆ 24 ಲಕ್ಷ ರೂಪಾಯಿ ದಂಡ
ಕೊಹ್ಲಿ ಟಿ 20 ಐ ಕ್ರಿಕೆಟಿಗನಾಗಿ ಒಂದು ಶತಕ ಮತ್ತು 37 ಅರ್ಧಶತಕಗಳನ್ನು ಹೊಂದಿದ್ದಾರೆ. ಆದರೆ ಬಾಬರ್ ಇಲ್ಲಿಯವರೆಗೆ ಪಾಕಿಸ್ತಾನಕ್ಕಾಗಿ ಮೂರು ಶತಕಗಳು ಮತ್ತು 35 ಅರ್ಧಶತಕಗಳನ್ನು ಗಳಿಸಿದ್ದಾರೆ. ಇಬ್ಬರೂ ಆಟಗಾರರು ಟಿ 20 ಮಾದರಿಯಲ್ಲಿ ಗರಿಷ್ಠ 122 ರನ್ ಬಾರಿಸಿದ್ದಾರೆ. ಅದರಲ್ಲಿ ಕೊಹ್ಲಿ ಅಜೇಯವಾಗಿ ಉಳಿದಿದ್ದಾರೆ.
ರನ್ಗಳ ಅಗ್ರಸ್ಥಾನದಲ್ಲಿ ಕೊಹ್ಲಿ
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಟಿ 20 ಐ ಕ್ರಿಕೆಟ್ನಲ್ಲಿ 4037 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಬಾಬರ್ ಇಲ್ಲಿಯವರೆಗೆ 3880 ಟಿ 20 ಐ ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ (34), ಮೊಹಮ್ಮದ್ ರಿಜ್ವಾನ್ (27) ಮತ್ತು ಡೇವಿಡ್ ವಾರ್ನರ್ (27) ಟಿ 20 ಪಂದ್ಯಗಳಲ್ಲಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಇತರ ಆಟಗಾರರು.
ಪಂದ್ಯದಲ್ಲಿ ಏನಾಯಿತು?
ಐರ್ಲೆಂಡ್ ಟೂರ್ನಲ್ಲಿರುವ ಪಾಕಿಸ್ತಾನ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಎದುರಿಸಿದೆ. ಟಾಸ್ ಸೋತ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 6 ವಿಕೆಟ್ಗೆ 183 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಐರ್ಲೆಂಡ್ ಆ್ಯಂಡಿ ಬಲ್ಬಿರಿನ್ ಅವರ 77 ರನ್ಗಳ ನೆರವಿನಿಂದ 1 ಎಸೆತ ಬಾಕಿ ಇರುವಾಗ ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಸಾಧಿಸಿತು.