Site icon Vistara News

IPL 2024 : ಬೈರ್​ಸ್ಟೋವ್​ ಸ್ಫೋಟಕ ಶತಕ; ಕೆಕೆಆರ್​ ವಿರುದ್ಧ ಪಂಜಾಬ್​​ಗೆ ವಿಶ್ವ ದಾಖಲೆಯ ವಿಜಯ

IPL 2024

ಕೋಲ್ಕೊತಾ: ಇಲ್ಲಿನ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮತ್ತೊಂದು ಐಪಿಎಲ್ (IPL 2024)​ ದಾಖಲೆ ಸೃಷ್ಟಿಯಾಗಿದೆ. ಐಪಿಎಲ್​ ಇತಿಹಾಸದಲ್ಲಿ ಗರಿಷ್ಠ ರನ್​ಗಳನ್ನು ಚೇಸ್ ಮಾಡಿದ ಖ್ಯಾತಿಯನ್ನು ಪಂಜಾಬ್ ಕಿಂಗ್ಸ್​​ ತಂಡ ತನ್ನದಾಗಿಸಿಕೊಂಡಿದೆ. ಆತಿಥೇಯ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ನೀಡಿದ್ದ 262 ರನ್​​ಗಳನ್ನು ಗುರಿಯನ್ನು ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಮೀರಿದ ಪಂಜಾಬ್ ತಂಡ 8 ವಿಕೆಟ್​ಗಳ ವಿಶ್ವ ದಾಖಲೆಯ ವಿಜಯವನ್ನು ತನ್ನದಾಗಿಸಿಕೊಂಡಿದೆ. ಆರಂಭಿಕ ಬ್ಯಾಟರ್​ ಜಾನ್​ ಬೈರ್​ಸ್ಟೋವ್ 49 ಎಸೆತಗಳಲ್ಲಿ ಅಜೇಯ 108 ರನ್​ (ಶತಕ) ಬಾರಿಸಿದರೆ ಶಶಾಂಕ್ ಸಿಂಗ್ ಮತ್ತೊಂದು ಬಾರಿ ಅಬ್ಬರದ ಪ್ರದರ್ಶನ ನೀಡಿ 28 ಎಸೆತಕ್ಕೆ 68 ರನ್ ಬಾರಿಸಿ ​ (ಅರ್ಧ ಶತಕ) ತಂಡಕ್ಕೆ ಗೆಲುವು ತಂದುಕೊಟ್ಟರು. ಪಂದ್ಯಾವಳಿಯ ಅತ್ಯಂತ ಬಲಿಷ್ಠ ತಂಡ ಎನಿಸಿಕೊಂಡಿದ್ದ ಕೋಲ್ಕೊತಾ ಇದೀಗ ದುರ್ಬಲ ಎಂದು ಕರೆಸಿಕೊಂಡಿದ್ದ ಪಂಜಾಬ್ ವಿರುದ್ಧ ಹೀನಾಯ ಸೋಲಿಗೆ ಒಳಗಾಗಿದೆ.

ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೋಲ್ಕೊತಾ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 261 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 18.4 ಓವರ್​ಗಳಲ್ಲಿ ಕೇವಲ 2 ವಿಕೆಟ್ ನಷ್ಟ ಮಾಡಿಕೊಂಡು 262 ರನ್ ಬಾರಿಸಿ ಗೆಲುವು ಸಾಧಿಸಿತು. ಇದು ಪಂಜಾಬ್ ತಂಡಕ್ಕೆ ಹಾಲಿ ಆವೃತ್ತಿಯ 9 ಪಂದ್ಯಗಳಲ್ಲಿ ದೊರಕಿದ ಮೂರನೇ ಗೆಲುವಾಗಿದೆ. ಇದೇ ವೇಳೆ ಕೆಕೆಆರ್​ ತಂಡಕ್ಕೆ 8 ರಲ್ಲಿ ಮೂರು ಸೋಲು ಎದುರಾಯಿತು.

2020ರ ಆವೃತ್ತಿಯ ಐಪಿಎಲ್​ನಲ್ಲಿ ಪಂಜಾಬ್ ತಂಡ ನೀಡಿದ್ದ 224 ರನ್​ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್​ ತಂಡ ಮೀರಿದ್ದು ಇದುವರೆಗಿನ ಗರಿಷ್ಠ ರನ್​ಗಳ ಚೇಸಿಂಗ್​ ದಾಖಲೆಯಾಗಿತ್ತು. ತನ್ನ ವಿರುದ್ಧ ಮಾಡಿದ್ದ ದಾಖಲೆಯನ್ನು ಪಂಜಾಬ್ ಬೇರೊಂದು ತಂಡವನ್ನು ಸೋಲಿಸುವ ಮೂಲಕ ತನ್ನ ಹೆಸರು ಬರೆದುಕೊಂಡಿತು. ಆ ಪಂದ್ಯವು ಯುಎಇನ ಶಾರ್ಜಾದಲ್ಲಿ ನಡೆದಿತ್ತು.

ಅನಿರೀಕ್ಷಿತ ಫಲಿತಾಂಶ

ಬ್ಯಾಟಿಂಗ್​ನಲ್ಲಿ ಅಷ್ಟೇನೂ ಬಲಿಷ್ಠ ಎನಿಸಕೊಳ್ಳದ ಪಂಜಾಬ್ ಈ ಪಂದ್ಯವನ್ನು ಗೆಲ್ಲುವುದು ಅಸಾಧ್ಯ ಎಂದು ಅಂದುಕೊಳ್ಳಲಾಗಿತ್ತು. ಆದರೆ, ಆರಂಭದಲ್ಲಿಯೇ ಪಂಜಾಬ್ ತಂಡದ ಆಟಗಾರರು ಅಬ್ಬರಿಸಿದರು. ಪ್ರಭ್ ಸಿಮ್ರಾನ್ ಸಿಂಗ್​ 20 ಎಸೆತಗಳಲ್ಲಿ 54 ರನ್ ಬಾರಿಸಿ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟರೆ ಬೈರ್​ಸ್ಟೋವ್ ಅದನ್ನು ಮುಂದುವರಿಸಿದರು. ಪ್ರಭ್​ ಸಿಮ್ರಾನ್ ಸಿಂಗ್​ ಅನಗತ್ಯ ರನ್​ಔಟ್​ಗೆ ಬಲಿಯಾದ ಬಳಿಕ ಬಂದ ರೀಲೀ ರೊಸ್ಸೊ 26 ರನ್ ಬಾರಿಸಿ ನಿರ್ಗಮಿಸಿದರು.

ಎರಡು ವಿಕೆಟ್​ಗಳು ಪತನಗೊಂಡ ಬಳಿಕ ರನ್​ ಗಳಿಕೆ ಕುಗ್ಗಬಹುದು ಎಂಬ ಅಂದಾಜು ಕೂಡ ಸರಿಯಾಗಲಿಲ್ಲ .ಪಂಜಾಬ್​ ಪರ ಆಪತ್ಬಾಂಧವ ಎನಿಸಿಕೊಂಡಿರುವ ಶಶಾಂಕ್ ಸಿಂಗ್ ಮತ್ತೊಂದು ಸೂಪರ್ ಇನಿಂಗ್ಸ್ ಆಡಿದರು. 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದಾಗ ಪಂಜಾಬ್​ ಗೆಲುವಿನ ಸನಿಹಕ್ಕೆ ಬಂತು. ಶಶಾಂಕ್ 8 ಸಿಕ್ಸರ್​ಗಳನ್ನು ಬಾರಿಸಿ ಪ್ರೇಕ್ಷಕರನ್ನು ರಂಜಿಸಿದರು. ಅದಕ್ಕಿಂತ ಮೊದಲು 45 ಎಸೆತಗಳಲ್ಲಿ ಶತಕ ಬಾರಿಸಿ ಬೈರ್​ಸ್ಟೋವ್ ಗೆಲುವಿನ ರೂವಾರಿ ಎನಿಸಿಕೊಂಡರು. ಅವರ ಇನಿಂಗ್ಸ್​ನಲ್ಲಿ 9 ಸಿಕ್ಸರ್ ಹಾಗೂ 8 ಫೋರ್​ಗಳಿದ್ದವು. ಇಬ್ಬರೂ ಅಜೇಯರಾಗಿ ಉಳಿದರು.

ಇದನ್ನೂ ಓದಿ: Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

ಕೋಲ್ಕೊತಾದ ಅಬ್ಬರ

ಮೊದಲು ಬ್ಯಾಟ್​ ಮಾಡಿದ ಕೋಲ್ಕತಾ ತಂಡವೂ ಎಕ್ಸ್​ಪ್ರೆಸ್​ ವೇಗದಲ್ಲಿ ರನ್ ಗಳಿಸಿತು. ಫಿಲ್ ಸಾಲ್ಟ್​ 37 ಎಸೆತಕ್ಕೆ 75 ರನ್ ಗಳಿಸಿದರೆ ಸುನಿಲ್ ನರೈನ್​ 32 ಎಸೆತಕ್ಕೆ 71 ರನ್ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್​​ಗೆ 138 ರನ್ ಬಾರಿಸಿತು. ವೆಂಕಟೇಶ್ ಅಯ್ಯರ್​ 39, ಆ್ಯಂಡ್ರೆ ರಸೆಲ್​ 24 ಹಾಗೂ ಶ್ರೇಯಸ್​ ಅಯ್ಯರ್​ 28 ರನ್ ಹೊಡೆದರು. ದೊಡ್ಡ ಮೊತ್ತವು ಕೋಲ್ಕೊತಾ ತಂಡಕ್ಕೆ ಬಹುತೇಕ ಜಯನ್ನು ನೀಡಿತ್ತು. ಆದರೆ, ಅದು ಸುಳ್ಳಾಯಿತು.

Exit mobile version