Site icon Vistara News

ದಿಲ್ಲಿ ಮಾತ್ರವಲ್ಲ, ದೇಶಾದ್ಯಂತ ಪಟಾಕಿ ನಿಷೇಧ ಎಂದ ಸುಪ್ರೀಂ ಕೋರ್ಟ್

America tortured Nikhil Gupta, Petition to the Supreme Court

ನವದೆಹಲಿ: ದಿಲ್ಲಿ (Delhi) ಮತ್ತು ಎನ್‌ಸಿಆರ್ ಮಾತ್ರವಲ್ಲದೇ ದೇಶಾದ್ಯಂತ ರಾಸಾಯನಿಕ ಪಟಾಕಿಗಳನ್ನು (Firecrackers) ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟಪಡಿಸಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಸಿರು ಪಟಾಕಿಗಳ ಬಳಕೆಯನ್ನು ಮಾತ್ರ ಅನುಮತಿಸುವ 2021ರ ಆದೇಶವು ದೆಹಲಿ-ಎನ್‌ಸಿಆರ್‌ಗೆ ಮಾತ್ರವಲ್ಲದೆ ದೇಶಾದ್ಯಂತ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣೆಯ ಸಂದರ್ಭದಲ್ಲಿ ಪೀಠವು “ಇಂದಿನ ದಿನಗಳಲ್ಲಿ” ಮಕ್ಕಳು ಪಟಾಕಿ ಸಿಡಿಸುವುದಿಲ್ಲ. ಬದಲಿಗೆ ಆ ಕೆಲಸವನ್ನು ಹಿರಿಯರು ಮಾಡುತ್ತಾರೆ ಎಂದು ಹೇಳಿತು. ಅಲ್ಲದೇ, ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪೀಠ ತಿಳಿಸಿತು.

ಬೇರಿಯಂ ಮತ್ತು ಇತರ ಮಾಲಿನ್ಯಕಾರಕ ರಾಸಾಯನಿಕಗಳನ್ನು ಬಳಸುವ ಪಟಾಕಿಗಳ ಬಳಕೆಯನ್ನು ನಿಷೇಧಿಸುವ ಮತ್ತು ಹಬ್ಬದ ಅವಧಿಯಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನ್ಯಾಯಾಲಯದ ಆದೇಶಗಳನ್ನು ಅನುಸರಿಸಲು ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದ್ರೇಶ್ ಅವರ ಪೀಠವು ಆಲಿಸಿತು. ಈ ಸಂಬಂಧ ಈ ಹಿಂದೆ ನೀಡಲಾದ ಆದೇಶವು ದೇಶಾದ್ಯಂತ ಅನ್ವಯಿಸುತ್ತದೆ. ಹಾಗಾಗಿ, ರಾಜಸ್ಥಾನವು ನ್ಯಾಯಾಯಲವು ಈ ಹಿಂದೆ ನೀಡಿದ ತೀರ್ಪುಗಳನ್ನು ಗಮನಿಸಬೇಕು ಎಂದು ಹೇಳಿತು.

2021ರಲ್ಲಿ ಸುಪ್ರೀಂ ಕೋರ್ಟ್, ಸಂಪೂರ್ಣವಾಗಿ ಪಟಾಕಿ ಮೇಲೆ ನಿಷೇಧ ಹೇರಿಲ್ಲ. ಯಾವ ಪಟಾಕಿಗಳು ಬೇರಿಯಂ ರಾಸಾಯನಿಕ ಹೊಂದಿವೆಯೋ ಅವುಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿತ್ತು. ಆದರೆ, ಈ ಆದೇಶವನ್ನು ವ್ಯಾಪಕವಾಗಿ ಉಲ್ಲಂಘನೆ ಮಾಡುತ್ತಾ ಬರಲಾಗಿದೆ. ಈ ಕುರಿತು ನ್ಯಾಯಾಲಯವು ವಿವಿಧ ಹಂತದ ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೇ, ಉಲ್ಲಂಘನೆಗೆ ವೈಯಕ್ತಿಕವಾಗಿ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡುವುದಾಗಿಯೂ ಹೇಳಿತ್ತು.

2018ರಲ್ಲಿ ನ್ಯಾಯಾಲಯವು ಪಟಾಕಿ ಸುಡಲು ಸಮಯವನ್ನು ನಿಗದಿಪಡಿಸಿತ್ತು. ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ರಾತ್ರಿ 11.55ರಿಂದ, 12.30ರವರೆಗಿನ ಅವಧಿಯಲ್ಲಿ ಪಟಾಕಿ ಸುಡಲು ಅವಕಾಶ ಕಲ್ಪಿಸಿತ್ತು.

ಈ ಸುದ್ದಿಯನ್ನೂ ಓದಿ: Deepavali 2023: ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 11 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

Exit mobile version