Site icon Vistara News

Bangalore Central Election Result 2024 : ಪಿ.ಸಿ ಮೋಹನ್​ ಮರ್ಯಾದೆ ಉಳಿಸಿದ ಮಹದೇವರಪುರ ಕ್ಷೇತ್ರ!

Election Results 2024

ಬೆಂಗಳೂರು: ಲೋಕ ಸಭಾ ಚುನಾವಣಾ ಫಲಿತಾಂಶದಲ್ಲಿ ಕರ್ನಾಟಕದ ಮತದಾರರ ಪಾಲಿಗೆ ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರವೆಂದರೆ ಬೆಂಗಳೂರು ಸೆಂಟ್ರಲ್ (Bangalore Central Election Result 2024)​. ಇಲ್ಲಿ ಕೊನೇ ತನಕ ಕಾಂಗ್ರೆಸ್​ನ ಮನ್ಸೂರ್ ಅಲಿ ಖಾನ್​ ಗೆದ್ದಿದ್ದಾರೆ ಎಂದು ಅಂದುಕೊಂಡರೆ ಕೊನೇ ಕ್ಷಣದಲ್ಲಿ ಹಾಲಿ ಸಂಸದ ಪಿ. ಸಿ ಮೋಹನ್ ಅವರೇ ಗೆದ್ದು ಬೀಗಿದ್ದಾರೆ. ಈ ರೋಚಕ ಫಲಿತಾಂಶಕ್ಕೆ ಕಾರಣ ಮಂಜುಳಾ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರ. ಈ ಕ್ಷೇತ್ರವೊಂದೇ ಪಿ. ಸಿ ಮೋಹನ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಲೀಡ್​ ಕೊಡುವೆ ಮೂಲ ಅವರ ಮರ್ಯಾದೆ ಕಾಪಾಡಿದೆ.

ಸೆಂಟ್ರಲ್ ಕ್ಷೇತ್ರದ ಮತ ಎಣಿಕೆ ಕಾರ್ಯವು ವಸಂತನಗರದ ಮೌಂಟ್ ಕಾರ್ಮೆಲ್​ ಕಾಲೇಜಿನಲ್ಲಿ ನಡೆಯಿತು. ಇಲ್ಲಿ ಜಮಾಯಿಸಿದ್ದ ಕಾಂಗ್ರೆಸ್​ ಕಾರ್ಯಕರ್ತರು ಕೊನೇ ಸುತ್ತಿನ ತನಕ ಸಂಭ್ರಮಿಸಿದ್ದರೆ, ಬಿಜೆಪಿ ಕಾರ್ಯಕರ್ತರು ಕೊನೆಯಲ್ಲಿ ಸಂಭ್ರಮಿಸಿದ್ದರು. ಅದಕ್ಕಿಂತ ಮೊದಲು ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಸಂಪೂರ್ಣ ಸ್ಪರ್ಧೆ ಏರ್ಪಟ್ಟಿತ್ತು. ಹಿನ್ನಡೆ- ಮುನ್ನಡೆ ಆಗುತ್ತಿದ್ದಂತೆ ಪರಸ್ಪರ ಪಕ್ಷಗಳ ಕಾರ್ಯಕರ್ತರ ಕೇಕೆ ಹಾಕಿದರು.

ವಿಧಾನಸಭಾ ಕ್ಷೇತ್ರಮನ್ಸೂರ್​ ಅಲಿಖಾನ್​ಪಿ.ಸಿ. ಮೋಹನ್​
ಸರ್ವಜ್ಱನಗರ1,4079466,550
ಸಿ.ವಿ ರಾಮನ್​ನಗರ53,34673, 460
ಶಿವಾಜಿನಗರ70,73143,221
ಶಾಂತಿನಗರ70,18449,846
ಗಾಂಧಿನಗರ51,12374,447
ರಾಜಾಜಿನಗರ36,44875,917
ಚಾಮರಾಜಪೇಟೆ87,11644,163
ಮಹದೇವಪುರ1,15,5862,29, 632

ಮಂಗಳವಾರ ಮತ ಎಣಿಕೆ ಕಾರ್ಯ ಆರಂಭಗೊಂಡಾಗ ಅಂಚೆ ಮತಗಳನ್ನು ಲೆಕ್ಕ ಹಾಕಲಾಯಿತು. ಪಿ.ಸಿ ಮೋಹನ್ ಅವರು ಮುನ್ನಡೆ ಪಡೆದುಕೊಂಡರು. ನಂತರ ಇವಿಎಂ ಯಂತ್ರಗಳನ್ನು ತೆಗೆದು ಲೆಕ್ಕ ಹಾಕಲಾಯಿತು. ಆರಂಭದಲ್ಲಿ ಪಿ.ಸಿ ಮೋಹನ್​ ಮುನ್ನಡೆ ಸಾಧಿಸುತ್ತಲೇ ಹೋದರು. ಆದರೆ ಸರ್ವಜ್ಱನಗರ, ಶಾಂತಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇವಿಎಂಗಳನ್ನು ಲೆಕ್ಕ ಹಾಕುವ ವೇಳೆ ಕಾಂಗ್ರೆಸ್​ಗೆ ಮುನ್ನಡೆ ದೊರೆಯಿತು. ಆಗ ಸಂಭ್ರಮಿಸುವ ಸರದ ಕಾಂಗ್ರೆಸ್ ಕಾರ್ಯಕರ್ತರದ್ದಾಯಿತು. ಒಟ್ಟು ಮುನ್ನಡೆ 68 ಸಾವಿರದಿಂದ 72 ಸಾವಿರಕ್ಕೆ ಏರಿಕೆಯಾಯಿತು. ವಿಷಯ ತಿಳಿದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಮುನ್ನುಗ್ಗಲು ಆರಂಭಿಸಿದ್ದಾರೆ. ಆದರೆ ಅವರ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ.

ಮಹದೇವಪುರ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆ

ಮಹದೇವಪುರ ಕ್ಷೇತ್ರದಲ್ಲಿ ಎಣಿಕೆ ಆರಂಭಗೊಂಡಾಗ ಪಿ.ಸಿ ಮೋಹನ್ ಅವರಿಗೆ ಮುನ್ನಡೆ ಸಿಗಲು ಆರಂಭವಾಯಿತು. ಈ ವೇಳೆ ಎಣಿಕೆ ಕೇಂದ್ರನ್ನು ತೊರೆದಿದ್ದ ಬಿಜೆಪಿ ಕಾರ್ಯಕರ್ತರು ಮತ್ತೆ ಅಲ್ಲಿಗೆ ಬರಲು ಆರಂಭಿಸಿದರು. ಈ ಕ್ಷೇತ್ರವೊಂದೇ ಮೋಹನ್ ಅವರಿಗೆ 1,18,046 ಮತದ ಮುನ್ನಡೆ ತಂದುಕೊಟ್ಟಿತು. 32,707 ಮತಗಳ ಅಂತರದಿಂದ ಅವರು ಗೆದ್ದೇ ಬಿಟ್ಟರು.

ಇದನ್ನೂ ಓದಿ: Election Results 2024 : ಫಲಿತಾಂಶ ಬದಲಾಯಿಸಿದ್ದು ಮುಸ್ಲಿಂ ಮತಗಳೇ? ಈ ಬಾರಿ 15 ಮುಸ್ಲಿಂ ಸಂಸದರ ಆಯ್ಕೆ

ಮೋಹನ್​ ಸಾಧನೆ

ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪಿ.ಸಿ ಮೋಹನ್ ಅವರು ದಾಖಲೆ ಬರೆದರು. 2008ರಲ್ಲಿ ಕ್ಷೇತ್ರ ಮರುವಿಗಂಗಣೆಯಾದ ಬಳಿಕದಿಂದ ನಡೆದ 2009, 2014, 2019 ಹಾಗೂ 2024 ಚುನಾವಣೆಯಲ್ಲಿ ಗೆದ್ದು ಸಾಧನೆ ಮಾಡಿದ್ದಾರೆ.

ಧರ್ಮ ಧ್ರುವೀಕರಣ

ಬೆಂಗಳೂರು ಸೆಂಟ್ರಲ್​ ಕ್ಷೇತ್ರದಲ್ಲಿನ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳಲ್ಲಿ 3ರಲ್ಲಿ ಬಿಜೆಪಿ ಹಾಗೂ 5ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಜಮೀರ್​ ಅಹಮ್ಮದ್​, ಕೆ.ಜೆ ಜಾರ್ಜ್​, ದಿನೇಶ್​ ಗುಂಡೂರಾವ್​ ಅವರಂಥ ಮಂತ್ರಿಗಳೂ ಇದ್ದಾರೆ. ಇಲ್ಲೆಲ್ಲ ಅಲ್ಪ ಸಂಖ್ಯಾತರೂ ಸಾಕಷ್ಟಿದ್ದಾರೆ. ಧರ್ಮದ ಧ್ರುವೀಕರಣದ ಮೂಲಕ ಬಿಜೆಪಿಯನ್ನು ಸೋಲಿಸುವ ಯತ್ನ ಕಾಂಗ್ರೆಸ್​ನದ್ದಾಗಿತ್ತು. ಆ ಎಲ್ಲ ಯೋಜನೆಗಳನ್ನು ವಿಫಲಗೊಳಿಸಿದ್ದು ಮಹದೇವಪುರ ವಿಧಾನಸಭಾಕ್ಷೇತ್ರ. ಹಿಂದಿನ ಬಾರಿಯೂ ರಿಜ್ವಾನ್ ಅರ್ಷದ್ ಇಲ್ಲಿ ಪಿಸಿ ಮೋಹನ್ ವಿರುದ್ಧ ಸೋತಿದ್ದರು.

ಮುನ್ನಡೆ ಕೊಟ್ಟಿದ್ದು ಹೀಗೆ

ಸಚಿವ. ಕೆ.ಜೆ ಜಾರ್ಜ್​ ಪ್ರತಿನಿಧಿಸುವ ಸರ್ವಜ್ಱನಗರ (74,242 ಮತಗಳು), ಜಮೀರ್ ಅಹ್ಮದ್ ಪ್ರತಿನಿಧಿಸುವ ಚಾಮರಾಜಪೇಟೆ (42,953 ಮತಗಳು) ಮುನ್ನಡೆಯನ್ನು ಮನ್ಸೂರ್ ಅವರಿಗೆ ದೊರಕಿಸಿಕೊಟ್ಟಿತು. ಎನ್​ ಎ ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರ (20,338 ಮತಗಳು), ರಿಜ್ವಾನ್ ಅರ್ಷದ್ ಪ್ರತಿನಿಧಿಸುವ ಶಿವಾಜಿನಗರ (27,510 ಮತಗಳು) ಮುನ್ನಡೆಯನ್ನೂ ಕೊಟ್ಟಿತ್ತು. ಆದರೆ, ದಿನೇಶ್ ಗುಂಡೂರಾವ್ ಅವರ ಗಾಂಧಿನಗರದಲ್ಲಿ ಬಿಜೆಪಿಗೆ 23 ಸಾವಿರ ಮತಗಳ ಮುನ್ನಡೆ ಸಿಕ್ಕಿತ್ತು. ಇನ್ನು ಬಿಜೆಪಿ ಪ್ರತಿನಿಧಿಸು ರಘು ಅವರ ಸಿ.ವಿ ರಾಮನ್ ನಗರ 20, 114, ಸುರೇಶ್ ಕುಮಾರ್ ಅವರ ರಾಜಾಜಿನಗರ (39,429 ಮತಗಳು) ಲೀಡ್ ಕೊಟ್ಟಿತ್ತು. ಆದರೆ, ಚಿಂದಿ ಉಡಾಯಿಸಿದ್ದು ಮಹದೇವಪುರ ಕ್ಷೇತ್ರ 1.18 ಲಕ್ಷ ಲೀಡ್​ ಕೊಟ್ಟಿತು. ಮಹದೇವಪುರ ಕ್ಷೇತ್ರದಲ್ಲಿ ಐಟಿ ಉದ್ಯೋಗಿಗಳು, ಉತ್ತರ ಭಾರತದ ವಲಸಿಗರು ಜಾಸ್ತಿ ಇದ್ದಾರೆ. ಅವರೆಲ್ಲರೂ ಸೇರಿ ಬಿಜೆಪಿ ಗೆಲ್ಲಿಸಿದ್ದಾರೆ.

Exit mobile version