ಬೆಂಗಳೂರು: ರಾಜಧಾನಿಯ ವಿವಿಧೆಡೆ ಶನಿವಾರ ಸಂಜೆ ಭರ್ಜರಿ ಮಳೆ (Bangalore Rain) ಸುರಿದಿದ್ದು, ಹಲವೆಡೆ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ನಗರದ ಹೊರವಲಯದ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ವೀರಸಂದ್ರ ಸಿಗ್ನಲ್ ಬಳಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಇನ್ನು ನಗರದ ಕೆಲವು ಕಡೆ ಮಳೆ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪ್ರತಿ ಬಾರಿ ಮಳೆ ಬಂದಾಗ ಹೆದ್ದಾರಿ ಕೆರೆಯಂತಾಗುತ್ತದೆ. ಮಳೆಯ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆ ಜಲಾವೃತವಾಗುತ್ತದೆ. ಹೆದ್ದಾರಿಯಲ್ಲಿ ನಾಲ್ಕೈದು ಅಡಿಗಳಷ್ಟು ಮಳೆ ನೀರು ನಿಂತಿದ್ದರಿಂದ ಹೆದ್ದಾರಿಯ ಅವ್ಯವಸ್ಥೆಯಿಂದ ಹಲವು ವಾಹನಗಳು ಕೆಟ್ಟುನಿಂತಿವೆ. ಇನ್ನು ಜಲಾವೃತವಾದ ರಸ್ತೆಯಲ್ಲಿ ವಾಹನಗಳು ಸಂಚರಿಸಲಾಗದೆ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಸಿಲಿಕಾನ್ ಸಿಟಿಯ ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿ ನಗರ, ಕೋರಮಂಗಲ, ಎಂ.ಜಿ. ರಸ್ತೆ, ಕಬ್ಬನ್ ಪಾರ್ಕ್ ಸೇರಿ ನಗರದ ಹಲವೆಡೆ ಭರ್ಜರಿ ಮಳೆಯಾಗಿದೆ. ಪಾದಚಾರಿಗಳು ಮತ್ತು ವಾಹನ ಸವಾರರು ರಸ್ತೆ ದಾಟಲು ಪರದಾಡಿದರು.
ಕೆಲಸ ಕಾರ್ಯ ಮುಗಿಸಿಕೊಂಡು ಮನೆಗಳಿಗೆ ತೆರಳುತ್ತಿದ್ದ ವೇಳೆ ಭಾರಿ ಮಳೆ ಬಿದ್ದಿದ್ದರಿಂದ ವಾಹನ ಸವಾರರು ಬಸ್ ನಿಲ್ದಾಣಗಳು, ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರು. ಮಳೆ ನೀರಿನಿಂದ ಸಹಕಾರ ನಗರದ ಜಿ ಬ್ಲಾಕ್ ರಸ್ತೆಗಳು ಹಳ್ಳದಂತಾಗಿ ಬದಲಾಗಿದ್ದವು. ಇನ್ನು ಕೆಎಸ್ ಗಾರ್ಡನ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು.
ಸಂಜೆ ಸುರಿದ ಮಳೆಯಿಂದ ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಪರದಾಡಿದರು. ಮಳೆ ಬಂದರೆ ಇಲ್ಲಿನ ಜನ ಭಯದಲ್ಲೇ ದಿನ ಕಳೆಯುವ ಸ್ಥಿತಿ ಇದೆ. ಇನ್ನು ಮನೆಯ ಮುಂದೆ ಅಧಿಕಾರಿಗಳು ಗುಂಡಿ ತೆಗೆದು ಮುಚ್ಚದ ಹಿನ್ನೆಲೆಯಲ್ಲಿ ವಾಹನ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದಾರೆ.
ಯಲಹಂಕದಲ್ಲಿ ಧರೆಗುರುಳಿದ ಮರ
ಮಳೆಯಿಂದಾಗಿ ಯಲಹಂಕ ವಲಯದಲ್ಲಿನ ಜಕ್ಕೂರು ಬಳಿ ಮರ ಧರೆಗುರುಳಿದ್ದು, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಸ್ಥಳಕ್ಕೆ ಭೇಟಿ ನೀಡಿ ಕೂಡಲೆ ಮರ ತೆರವುಗೊಳಿಸಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಂದಿನ ದಿನಗಳ ಕಾಲ ಭಾರಿ ಮಳೆ ಸಾಧ್ಯತೆ
ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸದ್ಯ ಕೇರಳ ಪ್ರವೇಶಿಸಿರುವ ಮುಂಗಾರು, ನಂತರ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಈ ಬಾರಿ ಅವಧಿಗೂ ಮೊದಲೇ ಮುಂಗಾರು ಪ್ರವೇಶ ಮಾಡುತ್ತಿದೆ. ಕಳೆದ ವರ್ಷ ಜೂನ್ 15 ರಿಂದ ಮುಂಗಾರು ಪ್ರವೇಶವಾಗಿತ್ತು. ಆದರೆ ಈ ವರ್ಷ 15 ದಿನಗಳಿಗೂ ಮೊದಲೇ ಮುಂಗಾರು ಪ್ರವೇಶವಾಗುತ್ತಿದೆ. ಹೀಗಾಗಿ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದನ್ನೂ ಓದಿ | Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು
ಇನ್ನು ರಾಜ್ಯದಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗಕ್ಕೆ ಹವಮಾನ ಇಲಾಖೆ ಅಲರ್ಟ್ ನೀಡಿದ್ದುಮ ಬೆಂಗಳೂರಿನಲ್ಲಿ ಇಂದಿನಿಂದ ಐದು ದಿನ ಮಳೆ ಇರಲಿದೆ. ಗುಡುಗು – ಮಿಂಚು ಸಹಿತ ಬೀರುಗಾಳಿ ಮಳೆ ಸುರಿಯಲಿದೆ ಎಂದು ಮಾಹಿತಿ ನೀಡಿದೆ.