Site icon Vistara News

Bangalore Rural Election Result 2024 : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಮಂಜುನಾಥ್​ಗೆ ಗೆಲುವು

Bangalore Rural Election Result 2024

ಬೆಂಗಳೂರು: ಅತ್ಯಂತ ಜಿದ್ದಾಜಿದ್ದಿನ ಸ್ಪರ್ಧೆ ಎದುರಿಸಿದ ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಮಂಜುನಾಥ್​ (10,79,002 ಮತಗಳು) ಅವರು ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ನಿಕಟ ಸ್ಪರ್ಧಿ ಡಿ.ಕೆ ಸುರೇಶ್ (8,09355 ಮತಗಳು) ವಿರುದ್ಧ ವಿರುದ್ಧ 2,69, 647 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​ ತೆಕ್ಕೆಯಿಂದ ಸ್ಥಾನವನ್ನು ಕೈವಶ ಮಾಡಿಕೊಂಡಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಅಶ್ವತ್ಥನಾರಾಯಣ ಗೌಡ ಅವರನ್ನು 2,06,870 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ 2019 ರಲ್ಲಿ ಕಾಂಗ್ರೆಸ್ 54.12% ಮತಗಳನ್ನು ಹೊಂದಿತ್ತು.

2014ರ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಬಿಜೆಪಿಯ ಮುನಿರಾಜು ಗೌಡ ಅವರನ್ನು 2.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸುರೇಶ್ 6.52 ಲಕ್ಷ ಮತಗಳನ್ನು ಪಡೆದರೆ, ದೇವೇಗೌಡರು 4.21 ಲಕ್ಷ ಮತಗಳನ್ನು ಮಾತ್ರ ಪಡೆದಿದ್ದರು

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯ ಸಿ.ಪಿ.ಯೋಗೀಶ್ವರ್ ಅವರನ್ನು 1,30,275 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಶೇ.44.73ರಷ್ಟು ಮತಗಳನ್ನು ಪಡೆದಿತ್ತು.

ಕ್ಷೇತ್ರದ ವಿಶೇಷತೆ ಏನು?

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ (Bangalore Rural Lok Sabha Constituency) 24 ಲಕ್ಷ ಮತದಾರರನ್ನು ಹೊಂದಿರುವ ದೇಶದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಾನವು 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂತು. ಇಲ್ಲಿ ಮೊದಲ ಚುನಾವಣೆ 2009ರಲ್ಲಿ ಇಲ್ಲಿ ನಡೆಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ (JDS) ನಾಯಕ ಎಚ್.ಡಿ.ಕುಮಾರಸ್ವಾಮಿ (HD kumaraswmay) ಈ ಕ್ಷೇತ್ರದ ಮೊದಲ ಸಂಸದ. ಆದರೆ, 2013ರ ಉಪಚುನಾವಣೆ ಸೇರಿದಂತೆ ಸತತ ಎರಡು ಬಾರಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದುಕೊಂಡಿದೆ.

ಕ್ಷೇತ್ರ ವಿಂಗಡಣೆಗೆ ಮೊದಲು ಇದನ್ನು ಕನಕಪುರ ಲೋಕಸಭಾ ಕ್ಷೇತ್ರವಾಗಿ ಗುರುತಿಸಲಾಗಿತ್ತು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ಇಲ್ಲಿ ಕೊನೇ ಬಾರಿ ಗೆದ್ದಿದ್ದರು. ಎಂ.ವಿ.ಚಂದ್ರಶೇಖರ ಮೂರ್ತಿ ಈ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಅವುಗಳಲ್ಲಿ ಏಳು ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದವು. ತುಮಕೂರು ಜಿಲ್ಲೆಯ ಕುಣಿಗಲ್ ಜೊತೆಗೆ ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ರಾಜರಾಜೇಶ್ವರಿ ನಗರ ಹೊಸ ವಿಧಾನಸಭಾ ಕ್ಷೇತ್ರಗಳು ಇದರ ಭಾಗವಾಗಿವೆ.

ವ್ಯಾಪ್ತಿ ಹೇಗಿದೆ?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಣಿಗಲ್, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಬಿಜೆಪಿ 2, ಜೆಡಿಎಸ್ 1 ಸ್ಥಾನ ಹೊಂದಿವೆ. ಭಾರತದ ಚುನಾವಣಾ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು ಮತದಾರರ ಸಂಖ್ಯೆ 24,97,458. 2019ರಲ್ಲಿ ಶೇ.64.9ರಷ್ಟು ಮತದಾನವಾಗಿತ್ತು. 2011 ರ ಜನಗಣತಿಯ ಅಂಕಿಅಂಶಗಳ ಪ್ರಕಾರ ನಗರ ಮತದಾರರು ಒಟ್ಟು ಮತದಾರ ಪೈಕಿ 54.2% ರಷ್ಟಿದ್ದಾರೆ. ಸರಾಸರಿ ಸಾಕ್ಷರತಾ ಪ್ರಮಾಣವು 68.91% ಆಗಿತ್ತು.

Exit mobile version