ಬೆಂಗಳೂರು: ರಾಜಧಾನಿಯಲ್ಲಿ ನೀರಿನ ಕೊರತೆಯ (Bangalore Water Crisis) ಪರಿಣಾಮ ಜಲಸಂರಕ್ಷಣಾ ಕ್ರಮಗಳ (water protection) ಬಗ್ಗೆ ಕಠಿಣ ನಿಲುವು ತಳೆದಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಹೋಳಿ (Holi Festival) ಆಚರಣೆಯಲ್ಲಿ ಪೂಲ್ ಡ್ಯಾನ್ಸ್ (Pool Dance) ಮತ್ತು ಮಳೆ ನೃತ್ಯದಂತಹ (Rain Dance) ಚಟುವಟಿಕೆಗಳಿಗೆ ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಬಳಸುವುದನ್ನು ನಿಷೇಧಿಸಿದೆ.
ತೀವ್ರ ನೀರಿನ ಕೊರತೆಯ ನಡುವೆಯೂ ಹಲವಾರು ಸಂಸ್ಥೆಗಳು ಪೂಲ್ ಪಾರ್ಟಿಗಳು ಮತ್ತು ರೈನ್ ಡ್ಯಾನ್ಸ್‌ಗಳನ್ನು ಆಯೋಜಿಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ನಿರ್ದೇಶನ ಬಂದಿದೆ. ಈ ಆದೇಶದ ಪ್ರಕಟಣೆಯ ನಂತರ, ಅನೇಕ ಹೋಟೆಲ್‌ಗಳು ತಮ್ಮ ಪ್ರಚಾರ ಸಾಮಗ್ರಿಗಳಿಂದ ʼಮಳೆ ನೃತ್ಯ’ವನ್ನು ತಕ್ಷಣವೇ ತೆಗೆದುಹಾಕಿವೆ.
BWSSB ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ., ನಗರದಲ್ಲಿ ಬಿಗಡಾಯಿಸಿರುವ ನೀರಿನ ಸಮಸ್ಯೆಯನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಿದ್ದಾರೆ. “ಕೊರತೆ ಮಳೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಇದರ ಪರಿಣಾಮ ಅನೇಕ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಂಡಳಿ ಬದ್ಧವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ” ಎಂದು ಹೇಳಿದರು.
ಈ ನಿಷೇಧದ ಜೊತೆಗೆ, BWSSB ತಿಂಗಳ ಅಂತ್ಯದೊಳಗೆ ಭಾರಿ ನೀರಿನ ಗ್ರಾಹಕರು ಬಳಸುವ ಟ್ಯಾಪ್‌ಗಳಲ್ಲಿ ಏರೇಟರ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಈಗಾಗಲೇ ಕಾರ್ ತೊಳೆಯುವುದು, ಕಟ್ಟಡ ನಿರ್ಮಾಣ, ತೋಟಗಾರಿಕೆ, ಕಾರಂಜಿಗಳು ಮತ್ತು ಈಜುಕೊಳಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ವಾಣಿಜ್ಯ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳು, ರೆಸ್ಟೋರೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ನಲ್ಲಿಗಳಿಂದ ನೀರಿನ ಹರಿವನ್ನು ನಿಯಂತ್ರಿಸುವ ಏರೇಟರ್‌ಗಳು ಕಡ್ಡಾಯವಾಗಿರುತ್ತವೆ. ಮನೋಹರ್ ಮಾತನಾಡಿ, “ಏರೇಟರ್ ಅಳವಡಿಕೆಗೆ ಮಾರ್ಚ್ 21ರಿಂದ 31ರವರೆಗೆ ಸ್ವಯಂಪ್ರೇರಿತ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಇದರ ನಂತರ, ನಿರ್ದೇಶನವನ್ನು ಅನುಸರಿಸದ ಕಟ್ಟಡಗಳು ಕಡ್ಡಾಯ ಕ್ರಮ ಎದುರಿಸಬೇಕಾಗುತ್ತದೆ” ಎಂದಿದ್ದಾರೆ.
ಇದೇ ವೇಳೆ ರಾಜ್ಯದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಟೀಕಿಸಿದ್ದು, ಅವರು ನೀರಿನಾ ಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
“ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿಲ್ಲ. ಅವರು ಟ್ಯಾಂಕರ್ ಮಾಫಿಯಾಕ್ಕೆ ಶರಣಾಗಿದ್ದಾರೆ ಮತ್ತು ಅವರೊಂದಿಗೆ ಕೈಜೋಡಿಸಿದ್ದಾರೆ. ಅರ್ಧದಷ್ಟು ನೀರಿನ ಟ್ಯಾಂಕರ್‌ಗಳು ನೋಂದಣಿ ಆಗಿಲ್ಲ, ಸರ್ಕಾರದ ಆದೇಶದ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ನೋಂದಣಿ ಮಾಡಿಕೊಂಡಿರುವ ಟ್ಯಾಂಕರ್‌ಗಳು ಸರ್ಕಾರ ನಿಗದಿಪಡಿಸಿದ ಬೆಲೆಗೆ ನೀರು ನೀಡುತ್ತಿಲ್ಲ” ಎಂದು ಹೇಳಿದರು.
“ಸರಕಾರದ ನಿಯಮ ಉಲ್ಲಂಘಿಸಿ ನೋಂದಣಿ ಮಾಡದ ಟ್ಯಾಂಕರ್‌ಗಳ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲಾ ವಾರ್ಡ್ ಮಟ್ಟದಲ್ಲಿ ಮಾರ್ಷಲ್‌ಗಳನ್ನು ನೇಮಿಸಬೇಕು ಮತ್ತು ಟ್ಯಾಂಕರ್‌ಗಳ ಚಲನವಲನಗಳ ಮೇಲೆ ನಿಗಾ ಇಡಬೇಕು. ಸಹಾಯವಾಣಿ ವಿಫಲವಾಗಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸಲು ಕನಿಷ್ಠ 200 ಲೈನ್‌ಗಳ ಸಾಮರ್ಥ್ಯದ ಖಾಸಗಿ ಏಜೆನ್ಸಿಯೊಂದಿಗೆ ಕಾಲ್ ಸೆಂಟರ್ ಸ್ಥಾಪಿಸಬೇಕು” ಎಂದು ಅವರು ಹೇಳಿದರು.
ಬೆಂಗಳೂರಿಗೆ ಪ್ರಸ್ತುತ ದಿನಕ್ಕೆ 2,600 ಎಂಎಲ್‌ಡಿ ನೀರು ಅಗತ್ಯವಿದೆ. ಈಗ ಸುಮಾರು 500 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದರು. ಸಭೆ ನಡೆಸಿ ಕ್ರಿಯಾ ಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
“ಬೆಂಗಳೂರಿನಲ್ಲಿ 14,000 ಬೋರ್‌ವೆಲ್‌ಗಳಿದ್ದು, 6,900 ಬತ್ತಿ ಹೋಗಿವೆ. ಜಲಮೂಲಗಳು ಅತಿಕ್ರಮಿಸಲ್ಪಟ್ಟಿವೆ ಅಥವಾ ಸತ್ತಿವೆ. ಬೆಂಗಳೂರಿಗೆ 2,600 ಎಂಎಲ್‌ಡಿ ನೀರು ಬೇಕು. ಇದರಲ್ಲಿ 1,470 ಎಂಎಲ್‌ಡಿ ಕಾವೇರಿ ನದಿಯಿಂದ ಮತ್ತು 650 ಎಂಎಲ್‌ಡಿ ಬೋರ್‌ವೆಲ್‌ನಿಂದ ಬರುತ್ತದೆ. ನಮ್ಮಲ್ಲಿ ಸುಮಾರು 500 ಎಂಎಲ್‌ಡಿ ಕೊರತೆಯಿದೆ” ಎಂದು ನಾಗರಿಕ ಸಂಸ್ಥೆಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ತಿಳಿಸಿದ್ದಾರೆ.
ಇದನ್ನೂ ಓದಿ: Bangalore Water Crisis: ಮಾ.21ರಿಂದ ನಲ್ಲಿಗಳಿಗೆ ಏರಿಯೇಟರ್ ಕಡ್ಡಾಯ; ಬೆಂಗಳೂರು ಜಲಮಂಡಳಿ ಆದೇಶ