Site icon Vistara News

T20 World Cup 2024 : ವಿಶ್ವ ಕಪ್​ ಗೆದ್ದ ಭಾರತ ತಂಡಕ್ಕೆ ಬರೋಬ್ಬರಿ 125 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

T20 World Cup 2024

ಬೆಂಗಳೂರು: ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರಲ್ಲಿ (T20 World Cup 2024 ) ಚಾಂಪಿಯನ್ ಪಟ್ಟ ಅಲಂಕರಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಬಾರ್ಬಡೋಸ್​​ನಲ್ಲಿ ಶನಿವಾರ ನಡೆದ ವಿಶ್ವ ಕಪ್​ನ ಫೈನಲ್​ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸುವ ಮೂಲಕ ಭಾರತೀಯ ಪುರುಷರ ಕ್ರಿಕೆಟ್ ತಂಡವು ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಅಲ್ಲದೇ ಎರಡನೇ ಬಾರಿ ಟಿ20 ವಿಶ್ವ ಕಪ್​ ಗೆದ್ದುಕೊಂಡಿತು. 2007ರಲ್ಲಿ ಧೋನಿ ನೇತೃತ್ವದಲ್ಲಿ ಭಾರತ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಕಪ್​ ಗೆದ್ದುಕೊಂಡಿತ್ತು.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವಿಜೇತ ತಂಡಕ್ಕೆ 125 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ. ಭಾರತದ ಅತ್ಯುತ್ತಮ ಸಾಧನೆಗೆ ನೀಡಿದ ಕೊಡುಗೆಗಾಗಿ ಆಟಗಾರರು ಮತ್ತು ಎಲ್ಲಾ ಕೋಚಿಂಗ್ ಸಿಬ್ಬಂದಿಯನ್ನು ಅವರು ಅಭಿನಂದಿಸಿದ್ದಾರೆ.

“ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ಅನ್ನು ಗೆದ್ದ ಟೀಮ್ ಇಂಡಿಯಾಕ್ಕೆ 125 ಕೋಟಿ ರೂ.ಗಳ ಬಹುಮಾನದ ಮೊತ್ತವನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಜಯ್ ಶಾ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ. “ತಂಡವು ಪಂದ್ಯಾವಳಿಯುದ್ದಕ್ಕೂ ಅಸಾಧಾರಣ ಪ್ರತಿಭೆ, ದೃಢನಿಶ್ಚಯ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಈ ಅಸಾಧಾರಣ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ಅವರು ಬರೆದುಕೊಂಡಿದ್ದಾರೆ.

ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ವಿಶ್ವ ಕಪ್​ ಹಾಗೂ 17 ವರ್ಷಗಳ ಬಳಿಕ ದೊರೆತ ಟಿ20 ವಿಶ್ವ ಕಪ್​. ಭಾರತ ತಂಡ 2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವ ಕಪ್​ ಗೆದ್ದಿದ್ದರೆ 2011ರ ಏಕ ದಿನ ವಿಶ್ವ ಕಪ್ ಗೆದ್ದುಕೊಂಡಿತು.

ಇದನ್ನೂ ಓದಿ: Virat kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಕೊಹ್ಲಿ, ರೋಹಿತ್ ದಾಖಲೆಗಳ ವಿವರ ಇಲ್ಲಿದೆ

ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ನಿಗದಿತ 20 ಓವರ್​ಗಳು ಮುಕ್ತಾಯಗೊಳ್ಳುವಾಗ 7 ವಿಕೆಟ್​ ನಷ್ಟ ಮಾಡಿಕೊಂಡು 176 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 169 ರನ್ ಬಾರಿಸಿ ಸೋಲೊಪ್ಪಿಕೊಂಡಿತ್ತು.

ಅಂದ ಹಾಗೆ ಭಾರತ ತಂಡ ಈ ಬಾರಿಯ ಟ್ರೋಫಿಯನ್ನು ಅಜೇಯವಾಗಿ ಗೆದ್ದಿದೆ. ಟೂರ್ನಿಯುದ್ದಕ್ಕೂ ಪಂದ್ಯಾವಳಿಯುದ್ದಕ್ಕೂ ಎಲ್ಲಾ ಪಂದ್ಯಗಳನ್ನು ಗೆದ್ದು ಟ್ರೋಫಿ ಗೆದ್ದ ಮೊದಲ ತಂಡ ಎಂಬ ಇತಿಹಾಸ ಬರೆದಿದೆ. ಗುಂಪು ಹಂತದಲ್ಲಿ ಭಾರತ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿತ್ತು. ಒಂದು ಪಂದ್ಯ ಮಳೆಯಿಂದಾಗಿ ಕೊಚ್ಚಿಹೋಗಿತ್ತು. ಗಯಾನಾದಲ್ಲಿ ನಡೆದ ಸೆಮಿಫೈನಲ್​​ನಲ್ಲಿ ಗೆಲ್ಲುವ ಮೊದಲು ಭಾರತವು ಸೂಪರ್ ಎಂಟರ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಸೆಮಿಯಲ್ಲಿ ಇಂಗ್ಲೆಂಡ್ ಅನ್ನು 68 ರನ್​ಗಳಿಂದ ಸೋಲಿಸಿತ್ತು.

ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಆಡಿದ ತಂಡವು ರನ್​ ಗುರಿಯನ್ನು ಗುರಿಯನ್ನು ರಕ್ಷಿಸಿ ಗೆದ್ದಿರುವುದು ಇದು ಮೂರನೇ ಬಾರಿ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಈ ಸಾಧನೆ ಮಾಡಿದ್ದರೆ, 2012ರಲ್ಲಿ ವೆಸ್ಟ್ ಇಂಡೀಸ್ ಈ ಸಾಧನೆ ಮಾಡಿತ್ತು.

Exit mobile version