ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI ) ಏಪ್ರಿಲ್ 16ರಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL 2024 ) ತಂಡದ ಮಾಲೀಕರ ಸಭೆ ನಡೆಸಲು ಸಜ್ಜಾಗಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಕ್ರಿಕ್ಬಜ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಐಪಿಎಲ್ ಫ್ರಾಂಚೈಸಿಗಳ ಎಲ್ಲಾ 10 ಮಾಲೀಕರಿಗೆ ಆಹ್ವಾನ ನೀಡಲಾಗಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯ ಬಗ್ಗೆ ಐಪಿಎಲ್ ಸಿಇಒ ಹೇಮಂಗ್ ಅಮೀನ್ ಅವರು ಸಂದೇಶವನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ವರ್ಷದ ಐಪಿಎಲ್ಗೆ ಮುಂಚಿತವಾಗಿ ನಡೆಯಲಿರುವ ಮೆಗಾ ಹರಾಜಿಗೆ ಸಂಬಂಧಿಸಿದ ಹಲವಾರು ನೀತಿ ನಿರ್ಧಾರಗಳನ್ನು ಬಿಸಿಸಿಐ ಸಭೆಯಲ್ಲಿ ಚರ್ಚಿಸಲಿದೆ ಎಂದು ವರದಿ ಹೇಳಿದೆ. “ಅವರು ಐಪಿಎಲ್ನ ಮುಂದಿನ ಮಾರ್ಗಸೂಚಿಗಳನ್ನು ಚರ್ಚಿಸುತ್ತಾರೆ” ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲವೊಂದು ಕ್ರಿಕ್ಬಜ್ಗೆ ತಿಳಿಸಿದೆ.
ನಿರೀಕ್ಷೆಯಂತೆ, ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆಯು ಚರ್ಚೆಯ ಪ್ರಮುಖ ವಿಷಯವಾಗಿದೆ. ಸಂಖ್ಯೆಯ ಬಗ್ಗೆ ಯಾವುದೇ ಒಮ್ಮತದ ಅಭಿಪ್ರಾಯ ಇಲ್ಲದಿದ್ದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಾತುಕತೆ ಮೂಲಕ ಪರಿಹಾರ ಹೇಳುವುದು ನಿಶ್ಚಿ.ತ.
ಆಟಗಾರರ ಸಂಖ್ಯೆ ಹೆಚ್ಚಿಸಲು ಮನವಿ
ವರದಿ ಪ್ರಕಾರ, ಐಪಿಎಲ್ ಫ್ರಾಂಚೈಸಿ ಮಾಲೀಕರ ಒಂದು ವಿಭಾಗವು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಲು ಬಯಸುತ್ತಿದೆ. ತಂಡಗಳು ತಮ್ಮನ್ನು ತಾವೇ ಸ್ಥಾಪಿಸಿಕೊಂಡಿವೆ. ತಮ್ಮ ಬ್ರಾಂಡ್ ಮತ್ತು ಅಭಿಮಾನಿ ಬಳಗವನ್ನು ಬಲಪಡಿಸಲು ಕೆಲವೊಂದು ಆಟಗಾರರ ಅಗತ್ಯವಿದೆ ಎಂಬುದು ಈ ಫ್ರಾಂಚೈಸಿಗಳ ಮನವಿಯಾಗಿದೆ.
ಇದನ್ನೂ ಓದಿ: IPL 2024 : ಎಲ್ಎಸ್ಜಿ ವಿರುದ್ಧ ಗೆಲುವಿನ ಹಳಿಗೆ ಮರಳುವುದೇ ಆರ್ಸಿಬಿ?
2022ರಲ್ಲಿ ನಡೆದ ಕೊನೆಯ ಮೆಗಾ ಹರಾಜಿನಲ್ಲಿ, ತಂಡಗಳಿಗೆ ಗರಿಷ್ಠ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಯಿತು. ಆದರೆ, ಈ ಬಾರಿ ಎಂಟು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂದು ಫ್ರಾಂಚೈಸಿಗಳು ಬಯಸಿವೆ.
ಮತ್ತೊಂದು ಗುಂಪು ಅಂತಹ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶ ಇಲ್ಲದಿದ್ದರೂ ಪರ್ವಾಗಿಲ್ಲ, ಹಿಂದಿನ ಋತುವಿನಲ್ಲಿ ತಮ್ಮ ಪರವಾಗಿ ಆಡಿದ ಆಟಗಾರನಿಗೆ ಹೆಚ್ಚಿನ ಬಿಡ್ ಹೊಂದಿಸಲು ಮತ್ತು ಅವರ ಸೇವೆಗಳನ್ನು ಮತ್ತೆ ಪಡೆಯಲು ತಂಡಗಳಿಗೆ ಅನುವು ಮಾಡಿಕೊಡುವ ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಮತ್ತೆ ಪರಿಚಯಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಭೆಯಲ್ಲಿನ ಕಾರ್ಯಸೂಚಿಗಳ ಪಟ್ಟಿಯಲ್ಲಿ, ವೇತನ ಮಿತಿ ಅವುಗಳಲ್ಲಿ ಒಂದಾಗಿದೆ. ಕಳೆದ ಮಿನಿ ಹರಾಜಿನ ಸಮಯದಲ್ಲಿ, ಮಿತಿಯನ್ನು 100 ಕೋಟಿ ರೂ.ಗೆ ನಿಗದಿಪಡಿಸಲಾಗಿತ್ತು, ಆದರೆ ಎರಡು ವರ್ಷಗಳ ಹಿಂದೆ ಬಿಸಿಸಿಐ 48,390 ಕೋಟಿ ರೂ.ಗಳ ಪ್ರಸಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ತಂಡಗಳ ಕೇಂದ್ರ ಆದಾಯದ ಪಾಲಿನಲ್ಲಿ ಭಾರಿ ಏರಿಕೆ ಪರಿಗಣಿಸಿ ಇದು ಹೆಚ್ಚಾಗುವ ಸಾಧ್ಯತೆಯಿದೆ.