Site icon Vistara News

Domestic Cricket : ದೇಶೀಯ ಪಂದ್ಯಾವಳಿಗಳಲ್ಲಿ ಆಟಗಾರರಿಗೆ ಬಹುಮಾನದ ಮೊತ್ತವನ್ನು ಪರಿಚಯಿಸಿದ ಬಿಸಿಸಿಐ

Domestic Cricket

ಬೆಂಗಳೂರು : ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ದೇಶೀಯ ಕ್ರಿಕೆಟ್‌‌ನಲ್ಲಿ (Domestic Cricket) ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಬಹುಮಾನದ ಮೊತ್ತವನ್ನು ಪ್ರಕಟಿಸಿದ್ದಾರೆ. ಕಳೆದ ವರ್ಷ ಬಿಸಿಸಿಐ ದೇಶೀಯ ಪಂದ್ಯಾವಳಿಗಳಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ರಣಜಿ ಟ್ರೋಫಿ ವಿಜೇತರ ಬಹುಮಾನದ ಮೊತ್ತವನ್ನು 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಮತ್ತೊಂದೆಡೆ, ರನ್ನರ್ ಅಪ್ ಮತ್ತು ಸೆಮಿಫೈನಲ್‌‌ನಲ್ಲಿ ಸೋತವರಿಗೆ ಬಹುಮಾನದ ಮೊತ್ತವನ್ನು ಕ್ರಮವಾಗಿ 3 ಕೋಟಿ ಮತ್ತು 1 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಇರಾನಿ ಕಪ್, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದಿಯೋಧರ್ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಬಹುಮಾನದ ಮೊತ್ತವನ್ನು ಮಂಡಳಿ ಹೆಚ್ಚಿಸಿದೆ. ಮಹಿಳಾ ಪಂದ್ಯಾವಳಿಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿತ್ತು.

ದೇಶೀಯ ಪಂದ್ಯಾವಳಿಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಿದ ನಂತರ, ಬಿಸಿಸಿಐ ಈಗ ಆಟಗಾರರಿಗೆ ಬಹುಮಾನದ ಹಣ ಪರಿಚಯಿಸಲು ನಿರ್ಧರಿಸಿದೆ. ಎಲ್ಲಾ ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಂದ್ಯಶ್ರೇಷ್ಠ ಮತ್ತು ಪಂದ್ಯಾವಳಿಯ ಆಟಗಾರನಿಗೆ ಬಹುಮಾನದ ಮೊತ್ತವನ್ನು ಪರಿಚಯಿಸುವುದಾಗಿ ಜಯ್ ಶಾ ಸೋಮವಾರ (ಆಗಸ್ಟ್ 26) ಘೋಷಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಮೊತ್ತವನ್ನು ಪಡೆಯಲಿದ್ದಾರೆ.

ನಮ್ಮ ದೇಶೀಯ ಕ್ರಿಕೆಟ್ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಂದ್ಯಶ್ರೇಷ್ಠ ಮತ್ತು ಪಂದ್ಯಾವಳಿಯ ಆಟಗಾರನಿಗೆ ಬಹುಮಾನದ ಹಣವನ್ನು ಪರಿಚಯಿಸುತ್ತಿದ್ದೇವೆ” ಎಂದು ಜಯ್ ಶಾ ಬರೆದಿದ್ದಾರೆ. ಹಿರಿಯ ಪುರುಷರ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಬಹುಮಾನದ ಮೊತ್ತ ನೀಡಲಾಗುವುದು.

ಪ್ರತಿಭೆಗಳನ್ನು ಗುರುತಿಸಲು ಕ್ರಮ: ಜಯ್ ಶಾ

ಪೋಸ್ಟ್‌‌ನಲ್ಲಿ ಜಯ್ ಶಾ ಬಹುಮಾನ ನೀಡುವ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ್ದಾರೆ. ಬಹುಮಾನದ ಮೊತ್ತವು ದೇಶೀಯ ಸರ್ಕೀಟ್‌‌ನಲ್ಲಿ ಅತ್ಯುತ್ತಮ ಪ್ರದರ್ಶನ ಗುರುತಿಸುವ ಮತ್ತು ಬಹುಮಾನ ನೀಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಎಂದು ಅವರು ಹೇಳಿದ್ದಾರೆ. ಈ ಉಪಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌‌ಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: KL Rahul : ರಾಹುಲ್ ಲಕ್ನೊ ತಂಡದಲ್ಲಿ ಮುಂದುವರಿಯುವುದು ಖಚಿತ, ಮಾಲೀಕ ಗೊಯೆಂಕಾ ಭೇಟಿಯಾದ ಕನ್ನಡಿಗ

ಈ ಉಪಕ್ರಮವು ದೇಶೀಯ ಸರ್ಕೀಟ್‌ನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸುವ ಮತ್ತು ಬಹುಮಾನ ನೀಡುವ ಗುರಿ ಹೊಂದಿದೆ. ಈ ಪ್ರಯತ್ನದಲ್ಲಿ ಅಚಲ ಬೆಂಬಲ ನೀಡಿದ ಅಪೆಕ್ಸ್ ಕೌನ್ಸಿಲ್ ಗೆ ಹೃತ್ಪೂರ್ವಕ ಧನ್ಯವಾದಗಳು. ನಾವು ನಮ್ಮ ಕ್ರಿಕೆಟಿಗರಿಗೆ ಹೆಚ್ಚು ಲಾಭದಾಯಕ ವಾತಾವರಣ ಬೆಳೆಸುತ್ತಿದ್ದೇವೆ ಎಂದು ಜಯ್‌ ಶಾ ಬರೆದಿದ್ದಾರೆ.

ಶಾ ಬಿಸಿಸಿಐ ತೊರೆದು ಐಸಿಸಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಗ್ರೆಗ್ ಬಾರ್ಕ್ಲೇ ತಮ್ಮ ಒಪ್ಪಂದ ವಿಸ್ತರಿಸದೇ ಇರಲು ನಿರ್ಧರಿಸಿದ ನಂತರ ಮುಂದಿನ ಐಸಿಸಿ ಅಧ್ಯಕ್ಷರಾಗಿ ಅವರ ಸ್ಥಾನ ತುಂಬಲಿದ್ದಾರೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನಾಂಕವಾಗಿದ್ದು, ಶಾ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಶಾ ಅವರು ಈ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಏತನ್ಮಧ್ಯೆ, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಐಸಿಸಿಗೆ ಮಂಡಳಿ ತೊರೆದರೆ ಮುಂದಿನ ಬಿಸಿಸಿಐ ಕಾರ್ಯದರ್ಶಿಯಾಗಿ ಶಾ ಅವರ ಸ್ಥಾನ ತುಂಬುವ ನೆಚ್ಚಿನವರಾಗಿದ್ದಾರೆ.

Exit mobile version