Site icon Vistara News

MS Sathyu: ಹಿರಿಯ ನಿರ್ದೇಶಕ ಎಂ.ಎಸ್. ಸತ್ಯುಗೆ BIFFES ಜೀವಮಾನ ಸಾಧನೆ ಪ್ರಶಸ್ತಿ

Director MS Sathyu

ಬೆಂಗಳೂರು: ರಾಜ್ಯ ಸರ್ಕಾರದಿಂದ 2023-24ನೇ ಸಾಲಿನಲ್ಲಿ ಆಯೋಜಿಸಿರುವ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFES 2024) ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಈ ಬಾರಿ ಚಂದನವನದ ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು (MS Sathyu) ಅವರಿಗೆ ಪ್ರಶಸ್ತಿ ಸಂದಿದೆ.

ಈ ಬಗ್ಗೆ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದು, 2023-24ನೇ ಸಾಲಿನಲ್ಲಿ ಆಯೋಜಿಸಿರುವ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಸಮಿತಿಯು, ಮಾರ್ಚ್‌ 4ರಂದು ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮೂವರು ಸಂಭಾವ್ಯ ಗಣ್ಯರ ಪಟ್ಟಿಯಲ್ಲಿ ಒಬ್ಬರನ್ನು, ಅಂದರೆ ಎಂ.ಎಸ್. ಸತ್ಯು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಭಿನಂದನೆ

BIFFES ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರಿಗೆ ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಅವರು, ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ಹಾಗೂ ಕಲಾ ನಿರ್ದೇಶಕರಾದ ಮೈಸೂರು ಶ್ರೀನಿವಾಸ ಸತ್ಯು (ಎಂ.ಎಸ್.ಸತ್ಯು) ಅವರು ಕಲಾಜಗತ್ತಿಗೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ “15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ದ “ಜೀವಮಾನ ಸಾಧನೆ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ. ಅವರ ನಿರ್ದೇಶನದ ಹಿಂದಿ ಚಿತ್ರ ಗರಂ ಹವಾ ಹಲವಾರು ರಾಷ್ಟ್ರೀಯ – ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದರೆ, ಕನ್ನಡದ ‘ಬರ’ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿತ್ತು.

ಇದನ್ನೂ ಓದಿ | ಮಾ. 28ರಂದು ತೆರೆಗೆ ಬರಲಿದೆ ʼಆಡು ಜೀವಿತಂʼ; ʼಲಾರೆನ್ಸ್ ಆಫ್ ಅರೇಬಿಯಾ’ ಚಿತ್ರಕ್ಕೆ ಹೋಲಿಸಿದ ಎ.ಆರ್.ರೆಹಮಾನ್

ಕಲಾ ನಿರ್ದೇಶಕರಾಗಿ ಅವರು ನಿರ್ದೇಶಿಸಿದ ಮೊದಲ ಚಲನಚಿತ್ರವಾದ ಹಕೀಕತ್ ‘ಫಿಲ್ಮ್ ಫೇರ್ ಪ್ರಶಸ್ತಿ’ಯನ್ನು ಪಡೆದಿತ್ತು. ದಾರಾಶೀಕೋ ನಾಟಕವು ಆಧುನಿಕ ಉತ್ಕೃಷ್ಟ ನಾಟಕವೆಂದು ಗುರುತಿಸಲ್ಪಟ್ಟಿದ್ದು ಅವರ ಇನ್ನೊಂದು ಸಾಧನೆಯಾಗಿದೆ. ಹೀಗೆ ನಮ್ಮೂರಿನಲ್ಲಿ ಹುಟ್ಟಿದ ಮೇರು ಸಾಧಕ, ಹಿರಿಯ ರಂಗಕರ್ಮಿಯೊಬ್ಬರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

Exit mobile version