ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ಮೇಲ್ಮನೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ತಿಂಗಳಷ್ಟೇ ಗುಜರಾತ್ (Gujarat) ವಿಧಾನಸಭೆಯಿಂದ ರಾಜ್ಯಸಭೆಗೆ (Rajya Sabha) ಅವಿರೋಧವಾಗಿ ಆಯ್ಕೆಯಾಗಿದ್ದ ಅವರು ರಾಜೀನಾಮೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಮೊದಲಿನಿಂದಲೂ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಜೆ.ಪಿ. ನಡ್ಡಾ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ.
“ಹಿಮಾಚಲ ಪ್ರದೇಶದ ವಿಧಾನಸಭೆಯಿಂದ ಆಯ್ಕೆಯಾಗಿದ್ದ ಜಗತ್ ಪ್ರಕಾಶ್ ನಡ್ಡಾ ಅವರು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ರಾಜ್ಯಸಭೆ ಸಭಾಪತಿಯು ಅಂಗೀಕರಿಸಿದ್ದಾರೆ” ಎಂದು ರಾಜ್ಯಸಭೆ ಸಂಸದೀಯ ಪ್ರಕಟಣೆ ತಿಳಿಸಿದೆ. ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಜೆ.ಪಿ. ನಡ್ಡಾ ಅವರ ಅವಧಿಯು ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಈಗಾಗಲೇ ಅವರು ಗುಜರಾತ್ ವಿಧಾನಸಭೆಯಿಂದ ಕಳೆದ ತಿಂಗಳು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
BJP National President JP Nadda resigns from his position as Rajya Sabha MP and his resignation has been accepted by Rajya Sabha Chairman pic.twitter.com/Nvr8Pg1pFU
— ANI (@ANI) March 4, 2024
ಬಿಜೆಪಿಯು ಈಗಾಗಲೇ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನರೇಂದ್ರ ಮೋದಿ, ಅಮಿತ್ ಶಾ ಸೇರಿ ಹಲವು ಗಣ್ಯರಿಗೆ, ಯುವಕರು, ಮಹಿಳೆಯರಿಗೆ ಆದ್ಯತೆ ಕೊಟ್ಟು ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಿಸುವ ಮೊದಲೇ ಜೆ.ಪಿ. ನಡ್ಡಾ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವರು ರಾಜ್ಯಸಭೆಗೆ ಆಯ್ಕೆಯಾದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಖಾತ್ರಿಯಾಗಿತ್ತು.
ಇದನ್ನೂ ಓದಿ: BJP Candidate List: ಗಡಿನಾಡು ಕಾಸರಗೋಡು ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡ ಕನ್ನಡತಿ; ಯಾರು ಈ ಅಶ್ವಿನಿ?
ಜೆ.ಪಿ. ನಡ್ಡಾ ಅವರು ತಮ್ಮ ರಾಜ್ಯಸಭೆ ಸದಸ್ಯತ್ವದ ಅವಧಿ ಮುಗಿಯುವ ಮೊದಲೇ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದೇ ಈಗ ಚರ್ಚೆಗೆ ಕಾರಣವಾಗಿದೆ. ಜೆ.ಪಿ. ನಡ್ಡಾ ಅವರಿಗೆ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಹಾಗಾಗಿಯೇ, ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾದರೆ, ನಡ್ಡಾ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಇದುವರೆಗೆ ದೃಢವಾಗಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ