Site icon Vistara News

Narendra Modi : ಲಾಲು ಟೀಕೆಗೆ ಟಾಂಗ್​; ಬಿಜೆಪಿಯಿಂದ ‘ಮೋದಿ ಕಾ ಪರಿವಾರ್’ ಅಭಿಯಾನ

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಆರ್​ಜೆಡಿ ಮುಖ್ಯಸ್ಥ ಲಾಲು ಯಾದವ್ ಮಾಡಿರುವ ‘ಪರಿವಾರವಾದ್’ ಟೀಕೆಗೆ ಟಾಂಗ್ ಕೊಡಲೆಂದರು ಭಾರತೀಯ ಜನತಾ ಪಕ್ಷ (BJP) ಸೋಮವಾರ ‘ಮೋದಿ ಕಾ ಪರಿವಾರ್’ (Modi Ka Pariwar) ಎಂಬ ಪ್ರಮುಖ ಆನ್​ಲೈನ್​ ಅಭಿಯಾನ ಆರಂಭಿಸಿದೆ. ಅದರ ಭಾಗವಾಗಿ ಅಮಿತ್ ಶಾ (Amit Shah) ಮತ್ತು ಜೆಪಿ ನಡ್ಡಾ (JP Nadda) ಸೇರಿದಂತೆ ಹಲವಾರು ಉನ್ನತ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳ ತಮ್ಮ ಬಯೋದ ಮುಂದೆ ಮೋದಿ ಕಾ ಪರಿವಾರ್​ ಎಂದು ಸೇರಿಸಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಅಮಿತ್ ಶಾ, ಅನುರಾಗ್ ಠಾಕೂರ್ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತಮ್ಮ ಹೆಸರಿನೊಂದಿಗೆ ‘ಮೋದಿ ಕಾ ಪರಿವಾರ್’ ಎಂದು ಸೇರಿಸಿದ್ದಾರೆ.

ವಂಶಪಾರಂಪರ್ಯ ರಾಜಕೀಯದ ಬಗ್ಗೆ ಮೋದಿ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಆರ್​​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ನೇರ ದಾಳಿ ನಡೆಸಿದ್ದರು. ಭಾನುವಾರ ನಡೆದ ‘ಜನ ವಿಶ್ವಾಸ್ ಮಹಾ ರ್ಯಾಲಿಯಲ್ಲಿ’ ಮೈತ್ರಿಕೂಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, “ನರೇಂದ್ರ ಮೋದಿಯವರಿಗೆ ತಮ್ಮದೇ ಆದ ಕುಟುಂಬವಿಲ್ಲದಿದ್ದರೆ ನಾವು ಏನು ಮಾಡಲು ಸಾಧ್ಯ? ಅವರು ಸುಮ್ಮನೆ ರಾಮ ಮಂದಿರದ ಹೆಸರು ಹೇಳುತ್ತಲೇ ಓಡಾಡುತ್ತಾರೆ. ವಾಸ್ತವದಲ್ಲಿ ಅವರು ನಿಜವಾದ ಹಿಂದೂ ಅಲ್ಲ. ಹಿಂದೂ ಸಂಪ್ರದಾಯದಲ್ಲಿ ಮಗ ತನ್ನ ಹೆತ್ತವರ ಮರಣದ ನಂತರ ತಲೆ ಮತ್ತು ಗಡ್ಡವನ್ನು ಬೋಳಿಸಬೇಕು. ತಾಯಿ ತೀರಿಕೊಂಡಾಗ ಮೋದಿ ಹಾಗೆ ಮಾಡಲಿಲ್ಲ ಎಂದು ಹೇಳಿದ್ದರು.

ಲಾಲು ಪ್ರಸಾದ್ ಅವರ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಮೋದಿ “ನಾನು ಅವರ ವಂಶಪಾರಂಪರ್ಯ ರಾಜಕೀಯವನ್ನು ಪ್ರಶ್ನಿಸುತ್ತೇನೆ. ಮೋದಿಗೆ ಕುಟುಂಬವಿಲ್ಲ, ನನ್ನ ಜೀವನವು ತೆರೆದ ಪುಸ್ತಕ. ನಾನು ನನ್ನ ದೇಶಕ್ಕಾಗಿ ಬದುಕುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ :

ಇದನ್ನೂ ಓದಿ : ಕೊನೆಗೂ ಇ.ಡಿ ವಿಚಾರಣೆಗೆ ಒಪ್ಪಿದ ದೆಹಲಿ ಸಿಎಂ ಕೇಜ್ರಿವಾಲ್; ಕಂಡೀಷನ್ಸ್‌ ಅಪ್ಲೈ!

ಇದಕ್ಕೂ ಮುನ್ನ ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರು ಲಾಲೂ ಹೇಳಿಕೆಯನ್ನು ಟೀಕಿಸಿದ್ದು, ಇದು ಸನಾತನ ಧರ್ಮಕ್ಕೆ ಅಗೌರವ ಎಂದು ಹೇಳಿದ್ದರು. ಲಾಲು ಪ್ರಸಾದ್ ಸೇರಿದಂತೆ ಆರ್​ಜೆಡಿ ನಾಯಕರ ಇಂತಹ ನಡವಳಿಕೆಗಳು ರಾಜಕೀಯದ ಅವಿವೇಕವಾಗಿದೆ. ಶತಮಾನಗಳಷ್ಟು ಹಳೆಯದಾದ ಸನಾತನ ಧರ್ಮದ ಸಂಪ್ರದಾಯವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಎಂದು ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.

“ಭ್ರಷ್ಟಾಚಾರ ಪ್ರಕರಣಗಳಲ್ಲಿ ಸ್ವತಃ ಶಿಕ್ಷೆಗೊಳಗಾದ ಲಾಲು ಪ್ರಸಾದ್ ಅವರು ನಮ್ಮ ಪ್ರಧಾನಿ ವಿರುದ್ಧ ಬಳಸಿದ ಭಾಷೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ… ಅವರು (ಆರ್​ಜೆಡಿ ) ಸನಾತನ ಧರ್ಮದ ವಿರುದ್ಧವಾಗಿದ್ದಾರೆ. ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಟೀಕೆ ಮಾಡಿದ್ದರು.

ವಿಜಯ್ ಕುಮಾರ್ ಸಿನ್ಹಾ ಅವರು ಮೋದಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸನಾತನ ಧರ್ಮಕ್ಕೆ ಮೋದಿಯ ಕೊಡುಗೆಗಳನ್ನು ಎತ್ತಿ ತೋರಿಸಿದ್ದಾರೆ.

“ಅವರು (ಲಾಲು ಪ್ರಸಾದ್ ಸೇರಿದಂತೆ ಆರ್​​ಜೆಡಿ ನಾಯಕರು) ರಾಜಕೀಯ ಜೋಕರ್​​ಗಳಂತೆ ವರ್ತಿಸುತ್ತಾರೆ. ನಾವು ಅಂತಹ ಶಕ್ತಿಗಳನ್ನು ತಡಿಯಬೇಕು. ನಮ್ಮ ಪ್ರಧಾನಿ ಸನಾತನ ಧರ್ಮಕ್ಕಾಗಿ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ” ಎಂದು ಸಿನ್ಹಾ ಸುದ್ದಿಗಾರರಿಗೆ ಮಾತನಾಡುತ್ತಾ ಹೇಳಿದ್ದರು.

Exit mobile version