ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ (Lok Sabha Election) ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಅವರಂತಹ ಪ್ರಮುಖರನ್ನು ಒಳಗೊಂಡ ಸುಮಾರು 100 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಇಂದು (ಮಾರ್ಚ್1ರಂದು) ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಫೆಬ್ರುವರಿ 29ರ ಮಧ್ಯರಾತ್ರಿ 3 ಗಂಟೆ ತನಕ ಬಿಜೆಪಿಯ ರಾಷ್ಟ್ರೀಯ ಚುನಾವಣಾ ಸಮಿತಿ ಸಭೆ ನಡೆಸಿ 100 ಮಂದಿಯ ಪಟ್ಟಿಯನ್ನು ಫೈನಲ್ ಮಾಡಿದೆ. ಅದು ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮೋದಿ ನೇತೃತ್ವದ ಬಿಜೆಪಿ 3ನೇ ಅವಧಿಗೆ ಅಧಿಕಾರ ಹಿಡಿಯಲು ಸಜ್ಜಾಗಿರುವ ಕಾರಣ ಆಡಳಿತ ವಿರೋಧಿ ಅಲೆಗಳ ಶಮನ ಸೇರಿದಂತೆ ನಾನಾ ಸಂಗತಿಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗಿದೆ. ಅದೇ ರೀತಿ ಚುನಾವಣೆ ದಿನಾಂಕಗಳನ್ನು ಆಯೋಗ ಪ್ರಕಟಿಸುವ ಮೊದಲೇ ಪ್ರಥಮ ಹಂತದ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ, ಇನ್ನೂ ಸೀಟು ಹಂಚಿಕೆ ಗೊಂದಲದಲ್ಲಿರುವ ಇಂಡಿಯಾ ಬ್ಲಾಕ್ಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.
ಹಿಂದಿ ಹೃದಯಭಾಗ, ದಕ್ಷಿಣ ಫೋಕಸ್
ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ನಡೆದ ಸಭೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನ ಮತ್ತು ಮೋದಿಯವರ ತವರು ರಾಜ್ಯ ಗುಜರಾತ್ನ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಬಿಜೆಪಿ ಅಸ್ತಿತ್ವದಲ್ಲಿಲ್ಲದ ದಕ್ಷಿಣದ ರಾಜ್ಯಗಳಾದ ಕೇರಳ ಮತ್ತು ತೆಲಂಗಾಣದ ಅಭ್ಯರ್ಥಿಗಳ ಹೆಸರೂ ಚರ್ಚೆಗೆ ಬಂತು.
ಆಂಧ್ರಪ್ರದೇಶ, ಪಂಜಾಬ್ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳ ಅಭ್ಯರ್ಥಿಗಳ ಯಾರೆಂಬ ನಿರ್ಧಾರವನ್ನು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯಾಗುವ ತನಕ ತಡೆ ಹಿಡಿಯಲಾಗಿದೆ. ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಅಕಾಲಿ ದಳ ಮತ್ತು ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಲು ಯೋಜನೆ ರೂಪಿಸಲಾಗಿದೆ. ಆಂಧ್ರದಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ತೆಲುಗು ದೇಶಂ ಪಕ್ಷ-ಜನಸೇನಾ ಜತೆ ಮೈತ್ರಿಗೆ ಮಾಡುವ ಯೋಜನೆಯಿದೆ.
ಮೊದಲ ಪಟ್ಟಿಯಲ್ಲಿ ಮೋದಿ, ಅಮಿತ್ ಶಾ?
1991ರಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ವಾರಣಾಸಿಯಲ್ಲಿ (2004ರಲ್ಲಿ ಕಾಂಗ್ರೆಸ್ ಗೆಲುವು ಹೊರತುಪಡಿಸಿ) ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮೋದಿ ಮುಂದಾಗಲಿದ್ದಾರೆ. ಹೀಗಾಗಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಬಿಡುಗಡೆಯಾಗಲಿದೆ.
ಮಧ್ಯಪ್ರದೇಶದಲ್ಲಿ ಜೋತಿರಾಧಿತ್ಯ ಸಿಂಧಿಯಾ ಅವರ ನಿರೀಕ್ಷಿತ ಸ್ಥಾನವು ಅವರ ಕುಟುಂಬದ ಕೋಟೆಯಾಗಿರುವುದರಿಂದ ಖಚಿತವಾಗಿದೆ. 1952 ರಲ್ಲಿ ನಡೆದ ಮೊದಲ ಚುನಾವಣೆಯಿಂದ ಸಿಂಧಿಯಾ ರಾಜಮನೆತನವು ಗುನಾ ಕ್ಷೇತ್ರದಲ್ಲಿ 14 ಬಾರಿ ಗೆದ್ದಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರು 2002 (ಅವರ ತಂದೆ ಮಾಧವರಾವ್ ಸಿಂಧಿಯಾ ಅವರ ನಿಧನದಿಂದ ಅನಿವಾರ್ಯವಾದ ಉಪಚುನಾವಣೆ) ಮತ್ತು 2014 ರ ನಡುವೆ ಈ ಸ್ಥಾನವನ್ನು ಅಲಂಕರಿಸಿದ್ದರು.
ಇದನ್ನೂ ಓದಿ : Railway Union: ಮೇ 1ರಿಂದ ದೇಶಾದ್ಯಂತ ರೈಲು ಓಡಾಟ ಬಂದ್; ಕಾರಣವೇನು?
ಮೊದಲ ಪಟ್ಟಿಯಲ್ಲಿ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು 2004 ರಲ್ಲಿ (ಅಸ್ಸಾಂ ಗಣ ಪರಿಷತ್ನೊಂದಿಗೆ ಇದ್ದಾಗ) ಗೆದ್ದ ಅಸ್ಸಾಂನ ದಿಬ್ರುಗಢದಿಂದ ಸ್ಪರ್ಧಿಸಬಹುದು. ಅಸ್ಸಾಂನಾದ್ಯಂತ ಬಿಜೆಪಿ 11 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಅದರ ಮಿತ್ರ ಪಕ್ಷಗಳಾದ ಅಸ್ಸಾಂ ಗಣ ಪರಿಷತ್ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ಗೆ ಮೂರು ಸ್ಥಾನಗಳನ್ನು ಬಿಟ್ಟುಕೊಡಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ತಿಳಿಸಿದ್ದಾರೆ.
ಮಿತ್ರ ಪಕ್ಷಗಳಿಗೆ ಅವಕಾಶ
ಲೋಕಸಭೆಗೆ 80 ಸಂಸದರನ್ನು ಕಳುಹಿಸುವ ರಾಜಕೀಯವಾಗಿ ಪ್ರಮುಖವಾಗಿರುವ ಉತ್ತರ ಪ್ರದೇಶದ ಆರು ಸ್ಥಾನಗಳನ್ನು ಪ್ರಾದೇಶಿಕ ಮಿತ್ರ ಪಕ್ಷಗಳಾದ ಅಪ್ನಾ ದಳ ಮತ್ತು ಜಯಂತ್ ಚೌಧರಿ ಅವರ ರಾಷ್ಟ್ರೀಯ ಲೋಕದಳಕ್ಕೆ ಬಿಟ್ಟುಕೊಡುವ ಬಗ್ಗೆಯೂ ಸಭೆಯಲ್ಲಿ ಮಾತುಕತೆ ನಡೆದಿದೆ. ಒಟ್ಟಾರೆಯಾಗಿ, ಮಾರ್ಚ್ 10 ರೊಳಗೆ ಕನಿಷ್ಠ 50 ಪ್ರತಿಶತದಷ್ಟು ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಯೋಜನೆ ಬಿಜೆಪಿ ಮುಂದಿದೆ. 2019 ರಲ್ಲಿ ಬಿಜೆಪಿ ಅದೇ ಕಾರ್ಯತಂತ್ರವನ್ನು ಜಾರಿಗೆ ಮಾಡಿತು. ಚುನಾವಣಾ ದಿನಾಂಕಗಳನ್ನು ಘೋಷಿಸುವ ವಾರಗಳ ಮೊದಲು ಮಾರ್ಚ್ 21 ರಂದು 164 ಅಭ್ಯರ್ಥಿಗಳನ್ನು ಅದು ಬಹಿರಂಗಪಡಿಸಿತು.