ಮುಂಬೈ, ಮಹಾರಾಷ್ಟ್ರ: ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ (Maharashtra) ರಾಜಕೀಯ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ. ಸೈದ್ಧಾಂತಿಕ ವಿರೋಧಿಗಳಾಗಿದ್ದ ಎನ್ಸಿಪಿಯ (NCP) ಒಂದು ಬಣವು ಅಜಿತ್ ಪವಾರ್ (Ajit Pawar) ನೇತೃತ್ವದಲ್ಲಿ ಶಿಂಧೆ- ಬಿಜೆಪಿ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿದೆ. ಪರಿಣಾಮ, ಮಹಾರಾಷ್ಟ್ರದ ಭಾರತೀಯ ಜನತಾ ಪಾರ್ಟಿಯೊಳಗೆ (BJP) ಅಸಮಾಧಾನ ಹೊಗೆಯಾಡುತ್ತಿದೆ. ಮಹಾರಾಷ್ಟ್ರದ ಯುವ ನಾಯಕಿ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಂಜಾ (Pankaja Munde) ಮುಂಡೆ ಅವರು, ಈ ಹೊರ ರಾಜಕೀಯ ಸಮೀಕರಣ ಕುರಿತು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ, ಅವರು ಬಿಜೆಪಿ ತೊರೆದು ಬೇರೆ ಪಕ್ಷ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಸುದ್ದಿಗಳನ್ನು ತಳ್ಳಿ ಹಾಕಿರುವ ಪಂಕಜಾ ಮುಂಡೆ ಅವರು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದ್ದು, ಎರಡು ತಿಂಗಳ ಕಾಲ ರಜೆ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಈಗ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬಿಜೆಪಿಯ ಶಾಸಕರಲ್ಲಿ ಅಸಮಾಧಾನವಿದೆ. ಆದರೆ, ಹೆದರಿಕೆಯಿಂದಾಗಿ ಯಾರೂ ಬಹಿರಂಗವಾಗಿ ತಮ್ಮನ್ನು ಅಸಮಾಧಾನವನ್ನು ಹೊರ ಹಾಕುತ್ತಿಲ್ಲ ಎಂದು ಹೇಳಿದರು(NCP Crisis).
ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು, ತಮ್ಮ ಪಕ್ಷದಲ್ಲಿನ ಅನೇಕ ಶಾಸಕರು ಎನ್ಸಿಪಿ ವಿರುದ್ಧ ರಾಜಕೀಯ ಹೋರಾಟ ಮಾಡಿದ್ದಾರೆ. ಹಾಗಾಗಿ, ಎನ್ಸಿಪಿ ಜತೆಗಿನ ಬಿಜೆಪಿಯ ಸ್ನೇಹವನ್ನು ಅವರು ಸ್ವೀಕರಿಸಲು ಕಷ್ಟವಾಗುತ್ತದೆ. ಈ ಕುರಿತು ಪಂಕಜಾ ಮುಂಡೆ ಅವರೊಂದಿಗೆ ಪಕ್ಷದ ನಾಯಕತ್ವು ಮಾತನಾಡುತ್ತದೆ ಎಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ಗೋಪಿನಾಥ ಮುಂಡೆ ಅವರ ಪುತ್ರಿಯೂ ಆಗಿರುವ ಪಂಕಜಾ ಮುಂಡೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ವರದಿ ಮಾಡಿರುವ ಟಿವಿ ಚಾನೆಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಪ್ರಕಟಿಸಿದರು.
2019ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕಸಿನ್, ಎನ್ಸಿಪಿಯ ಧನಂಜಯ್ ಮುಂಡೆ ವಿರುದ್ಧ ಸೋಲು ಅನುಭವಿಸಿದ್ದ ಪಂಕಜಾ ಮುಂಡೆ ಅವರನ್ನು ಬಿಜೆಪಿಯು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. ಪಕ್ಷದೊಂದಿಗೆ ಅಸಮಾಧಾನ ಹೊಂದಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಇಂಥ ವರದಿಗಳು ಹೇಗೆ ಹರಡುತ್ತವೆ? ಹಲವು ಬಾರಿ ಪಕ್ಷದ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸದ ಕಾರಣವೇ? ನನ್ನನ್ನು ಕಡೆಗಣಿಸಲಾಗಿದೆ. ಈ ಕುರಿತು ಪಕ್ಷವೇ ಉತ್ತರಿಸಬೇಕು ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: NCP Crisis: ಎನ್ಸಿಪಿ ಮುಖ್ಯಸ್ಥ ಹುದ್ದೆಯಿಂದ ಶರದ್ ಪವಾರ್ರನ್ನೇ ಕಿತ್ತು ಹಾಕಿದ ಬಂಡಾಯ ನಾಯಕ ಅಜಿತ್!
20 ವರ್ಷಗಳಿಂದ ನಿರಂತರವಾಗಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆದಾಗ್ಯೂ, ನನ್ನ ನೈತಿಕತೆಯನ್ನು ಪ್ರಶ್ನಿಸಲಾಗುತ್ತದೆ ಮತ್ತು ವದಂತಿಗಳನ್ನು ಹಬ್ಬಿಸಲಾಗುತ್ತದೆ. ನಾನು ಎಂದಿಗೂ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನಾನು ಯಾವುದೇ ಪಕ್ಷವನ್ನು ಸೇರುತ್ತಿಲ್ಲ. ನಾನು ಏನೇ ಮಾಡುವುದಾಗಿದ್ದರೂ ಮುಕ್ತವಾಗಿ ಮಾಡುತ್ತೇನೆ. ಬಿಜೆಪಿಯ ಸಿದ್ಧಾಂತವು ನನ್ನ ರಕ್ತದಲ್ಲೇ ಇದೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಗೋಪಿನಾಥ್ ಮುಂಡೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆಯುತ್ತಿದ್ದೇನೆ ಎಂದು ಪಂಕಜಾ ಮುಂಡೆ ಅವರು ಹೇಳಿದರು.
ಈಗ ಹೊಸ ಪ್ರಯೋಗಗಳು ನಡೆಯುತ್ತಿವೆ. ಬಿಜೆಪಿಯ ಬಳಿ 105 ಶಾಸಕರಿದ್ದಾರೆ. ಈ ಪೈಕಿ ಬಹುತೇಕರಿಗೆ ಅಸಮಾಧಾನವಿದೆ. ಆದರೆ, ಅವರು ಹೆದರಿದ್ದಾರೆ. ಹಾಗಾಗಿ ಬಹಿರಂಗವಾಗಿ ಮಾತನಾಡುತ್ತಿಲ್ಲ. ನರೇಂದ್ರ ಮೋದಿ ಅವರು ನ ಖಾವೂಂಗಾ, ನ ಖಾನೆ ದುಂಗಾ ಎಂದು ಹೇಳಿದ್ದರು. ಜನರಿಗೆ ಈ ಹೇಳಿಕೆ ಭಾರೀ ಇಷ್ಟವಾಗಿತ್ತು ಎಂದು ಮಾರ್ಮಿಕವಾಗಿ ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.