Site icon Vistara News

Rajya Sabha Election: ಬಿಜೆಪಿಯಿಂದ ಮತ್ತೊಂದು ಪಟ್ಟಿ; ಇಬ್ಬರು ಸಚಿವರಿಗೆ ರಾಜ್ಯಸಭೆ ಟಿಕೆಟ್‌

Ashwini Vaishnaw And L Murugan

BJP nominates Ashwini Vaishnav and L Murugan for the Rajya Sabha; Here Is Candidates List

ನವದೆಹಲಿ: ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ (Rajya Sabha Election) ಬಿಜೆಪಿಯು ಮತ್ತೊಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ, ಇಬ್ಬರು ಕೇಂದ್ರ ಸಚಿವರಿಗೆ ಟಿಕೆಟ್‌ ನೀಡುವ ಮೂಲಕ ಮಹತ್ವದ ಕುತೂಹಲಗಳಿಗೆ ತೆರೆ ಎಳೆದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಒಡಿಶಾ ಹಾಗೂ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಎಲ್.‌ ಮುರುಗನ್‌ (L Murugan) ಅವರನ್ನು ಬಿಜೆಪಿಯು ಮಧ್ಯಪ್ರದೇಶದಿಂದ ಕಣಕ್ಕಿಳಿಸಿದೆ.

ರಾಜ್ಯಸಭೆ ಸದಸ್ಯರಾಗಿರುವ ಕೇಂದ್ರ ಸಚಿವರಿಗೆ ಬಿಜೆಪಿಯು ಟಿಕೆಟ್‌ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ರಾಜೀವ್‌ ಚಂದ್ರಶೇಖರ್‌ ಅವರಿಗೆ ನೀಡದ ಕಾರಣ ಇಂತಹ ಮಾತುಗಳು ಕೇಳಿಬಂದಿದ್ದವು. ಆದರೀಗ, ಇಬ್ಬರು ಕೇಂದ್ರ ಸಚಿವರಿಗೆ ಬಿಜೆಪಿಯು ರಾಜ್ಯಸಭೆ ಟಿಕೆಟ್‌ ನೀಡಿದೆ. ಇನ್ನು ಮಧ್ಯಪ್ರದೇಶದಿಂದ ಎಲ್‌.ಮುರುಗನ್ ಜತೆಗೆ ಉಮೇಶ್‌ನಾಥ್‌ ಮಹಾರಾಜ್‌, ಮಾಯಾ ನರೋಲಿಯಾ, ಬಾನ್ಸಿಲಾಲ್‌ ಗುರ್ಜಾರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಒಡಿಶಾದ ಮೂರು ಸ್ಥಾನಗಳಿಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಿಸಿದೆ. ಮೂರನೇ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿತ್ತು. ಆದರೆ, ಅಶ್ವಿನಿ ವೈಷ್ಣವ್‌ ಅವರನ್ನು ಕಣಕ್ಕಿಳಿಸಿದ ಬಿಜೆಪಿಯು ಕುತೂಹಲಕ್ಕೆ ತೆರೆ ಎಳೆದಿದೆ.

ಅಶ್ವಿನಿ ವೈಷ್ಣವ್‌ಗೆ ಬಿಜೆಡಿ ಬೆಂಬಲ

ಒಡಿಶಾದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವ ಅಶ್ವಿನಿ ವೈಷ್ಣವ್‌ ಅವರಿಗೆ ಬಿಜು ಜನತಾದಳ (BJD) ಬೆಂಬಲ ಘೋಷಿಸಿದೆ. “ಒಡಿಶಾದ ರೈಲ್ವೆ ಹಾಗೂ ಟೆಲಿಕಾಂ ಅಭಿವೃದ್ಧಿಯ ದೃಷ್ಟಿಯಿಂದಾಗಿ ಅಶ್ವಿನಿ ವೈಷ್ಣವ್‌ ಅವರಿಗೆ ಬೆಂಬಲ ನೀಡಲಾಗುತ್ತಿದೆ” ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ

ಕರ್ನಾಟಕದಿಂದ ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರಿಗೆ ಬಿಜೆಪಿಯು ಟಿಕೆಟ್‌ ನೀಡಿದೆ. ಬಿಜೆಪಿಯ ಸಂಖ್ಯಾಬಲದ ಆಧಾರದಲ್ಲಿ ಬಾಂಡಗೆ ಅವರಿಗೆ ನಿರಾಯಾಸ ಗೆಲುವು ಲಭ್ಯವಾಗಲಿದೆ. ಹೀಗಾಗಿ ಈ ಬಾರಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್‌ ನೀಡಿದಂತಾಗಿದೆ. ವಿ. ಸೋಮಣ್ಣ ಅವರು ರಾಜ್ಯಸಭೆಗೆ ಟಿಕೆಟ್‌ ಪಡೆಯಲು ಹಕಮಾಂಡ್‌ ಬಳಿ ಲಾಬಿ ನಡೆಸಿದ್ದರು. ಆದರೆ, ಕೊನೆಗೆ ಬಿಜೆಪಿಯು ಭಾಂಡಗೆ ಅವರಿಗೆ ಟಿಕೆಟ್‌ ನೀಡಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ಅವಧಿ ಶೀಘ್ರದಲ್ಲೇ ಮುಗಿಯಲಿದೆ.

ಇದನ್ನೂ ಓದಿ: Ashok Chavan: ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್; ರಾಜ್ಯಸಭೆಗೆ ಸ್ಪರ್ಧೆ

ಇದಕ್ಕೂ ಮೊದಲು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಬಿಜೆಪಿಯು ಕೆಲ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲೂ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಆರ್‌ಪಿಎನ್‌ ಸಿಂಗ್‌ ಅವರಿಗೆ ಟಿಕೆಟ್‌ ನೀಡಿದೆ. ಉತ್ತರ ಪ್ರದೇಶದಿಂದ ಆರ್‌ಪಿಎನ್ ಸಿಂಗ್ ಮಾತ್ರವಲ್ಲದೇ, ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಚೌಧರಿ ತೇಜ್ವೀರ್ ಸಿಂಗ್, ಸಾಧನಾ ಸಿಂಗ್, ಅಮರ್ ಪಾಲ್ ಮೌರ್ಯ, ಸಂಗೀತಾ ಬಲ್ವಂತ್ ಮ್ತತು ನವೀನ್ ಜೈನ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ ವೇಳೆ ಜಾತಿ ಸಮೀಕರಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕುರ್ಮಿ, ಬ್ರಾಹ್ಮಣ, ನಿಶಾದ್, ಜೈನ್, ರಜಪೂತ್, ಮೌರ್ಯ ಮತ್ತು ಜಾಟ್ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version