Site icon Vistara News

BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

BJP Muslim Candidate

BJP plans to field Muslim candidate in UP's assembly bypoll for the first time ever

ಲಖನೌ: ಬಿಜೆಪಿಯು ಚುನಾವಣೆ ಸಂದರ್ಭಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ (BJP Muslim Candidate) ಟಿಕೆಟ್‌ ನೀಡುವುದಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಮುಸ್ಲಿಂ ಅಭ್ಯರ್ಥಿಗೆ (Muslim Candidate) ಟಿಕೆಟ್‌ ನೀಡಿಲ್ಲ ಎಂಬುದು ಕೂಡ ಗಮನಾರ್ಹವಾಗಿದೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದ ಕುಂಡರ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ (Kundarki Assembly Bypoll) ಬಿಜೆಪಿಯು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಲು ಚಿಂತನೆ ನಡೆಸಿದೆ. ಇದು ಬಿಜೆಪಿಯ ರಣತಂತ್ರದ ಭಾಗವೂ ಆಗಿದೆ ಎಂದು ತಿಳಿದುಬಂದಿದೆ.

ಮೊರಾದಾಬಾದ್‌ ಜಿಲ್ಲೆಯ ಕುಂಡರ್ಕಿ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಜಿಯಾ ಉರ್‌ ರೆಹಮಾನ್‌ ಅವರು ಸಂಭಾಲ್‌ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ ಕಾರಣ ಕುಂಡರ್ಕಿ ಕ್ಷೇತ್ರದ ಶಾಸಕ ಸ್ಥಾನವು ತೆರವಾಗಿದೆ. ಇದಕ್ಕೆ ಉಪ ಚುನಾವಣೆ ನಡೆಯಲಿದ್ದು, ರಾಜ್ಯದ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಲು ಪಕ್ಷದಲ್ಲಿ ಉನ್ನತ ಮಟ್ಟದ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಯ ಕುರಿತು ಚರ್ಚಿಸಲಾಗಿದೆ. ಹಾಗೊಂದು ವೇಳೆ ಇದೇ ಅಂತಿಮವಾದರೆ, ಬಿಜೆಪಿಯ ಸಂಘಟನಾತ್ಮಕ ಜವಾಬ್ದಾರಿ ಹೊತ್ತಿರುವ ಹಿರಿಯ ಮುಸ್ಲಿಂ ನಾಯಕನಿಗೆ ಟಿಕೆಟ್‌ ಸಿಗಲಿದೆ ಎಂದೇ ಹೇಳಲಾಗುತ್ತಿದೆ.

ಬಿಜೆಪಿ ರಣತಂತ್ರ ಏನು?

ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕಳೆದ ಲೋಕಸಭೆ ಚುನಾವಣೆಯನ್ನು ರಾಮಮಂದಿರ, ಹಿಂದುತ್ವದ ಆಧಾರದ ಮೇಲೆ ಎದುರಿಸಿತ್ತು. ಇಷ್ಟಾದರೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಾನಗಳು ಗಣನೀಯವಾಗಿ ಕುಸಿದಿವೆ. ರಾಮಮಂದಿರ ಇರುವ ಅಯೋಧ್ಯೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ಸೋಲನುಭವಿಸಿದ್ದಾರೆ. ಹಾಗಾಗಿ, ಬಿಜೆಪಿಯು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡುವ ಮೂಲಕ ಮುಸ್ಲಿಂ ವಿರೋಧಿ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದು, ಮುಂಬರುವ ಚುನಾವಣೆಯಲ್ಲಿ ಮುಸ್ಲಿಮರ ಮತಗಳನ್ನೂ ಸೆಳೆಯುವುದು ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಸ್ಲಿಂ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲವೇ?

ಬಿಜೆಪಿಯು ಇದಕ್ಕೂ ಮೊದಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಮುಕ್ತಾರ್ ಅಬ್ಬಾಸ್‌ ನಖ್ವಿ ಅವರಿಗೆ‌ ಟಿಕೆಟ್‌ ನೀಡಿತ್ತು. ಅಷ್ಟೇ ಅಲ್ಲ, ಕೇರಳದ ಮಲಪ್ಪುರಂ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಬ್ದುಲ್‌ ಸಲಾಂ ಅವರು ಕಣಕ್ಕೆ ಇಳಿದಿದ್ದರು. ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರು 1998ರಲ್ಲಿ ಕೂಡ ರಾಮ್‌ಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರು 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬೇಗಂ ನೂರ್‌ ಬಾನೋ ವಿರುದ್ಧ ಸೋಲನುಭವಿಸಿದ್ದರು. ಇದೇ ವರ್ಷ ಬಿಹಾರದ ಕಿಶನ್‌ಗಂಜ್‌ ಲೋಕಸಭೆ ಕ್ಷೇತ್ರದಲ್ಲಿ ಸೈಯದ್‌ ಶಾಹ್‌ನವಾಜ್‌ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.

ಇದನ್ನೂ ಓದಿ: Narendra Modi: ಸಂಸತ್ತಲ್ಲಿ ಹಿಂದುಗಳಿಗೆ ಅವಮಾನ, ದೇವರಿಗೆ ಅಪಮಾನ, ಇದನ್ನು ಹಿಂದುಗಳು ಮರೆಯಲಾರರು ಎಂದ ಮೋದಿ

Exit mobile version