Site icon Vistara News

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

Pawan Singh

ನವದೆಹಲಿ: ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಟಿಕೆಟ್ ಪಡೆದ (BJP candidate list) ಭೋಜಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು ಉಮೇದುವಾರಿಕೆಯ ಅವಕಾಶವನ್ನು ತಿರಸ್ಕರಿಸಿದ್ದಾಎರ. ಕೆಲವು ‘ಕಾರಣಗಳಿಂದಾಗಿ’ ಈ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖ ರಾಜಕೀಯ ವ್ಯಕ್ತಿಗಳ ಹೆಸರುಗಳಿವೆ.

“ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಪಕ್ಷವು ನನ್ನನ್ನು ನಂಬಿತು ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್​ನಿಂದ ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ ಕೆಲವು ಕಾರಣಗಳಿಂದಾಗಿ ನಾನು ಅಸನ್ಸೋಲ್​ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ” ಎಂದು ಪವನ್ ಸಿಂಗ್ ಹೇಳಿಕೊಂಡಿದ್ದಾರೆ.

ಹೊರಗುಳಿಯಲು ಕಾರಣವೇನು?

ವರದಿಯ ಪ್ರಕಾರ, ಪವನ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಅರಾಹ್ ಸ್ಥಾನದಿಂದ ಬಿಜೆಪಿ ಟಿಕೆಟ್​ ಬಯಸಿದ್ದರು. ಬಿಹಾರದ ಅರಾಹ್ ಅವರಿಗೆ ಸುರಕ್ಷಿತ ಸ್ಥಾನವಾಗಿದೆ. ಯಾಕೆಂದರೆ ಅದು ಬಿಜೆಪಿಯ ಭದ್ರಕೋಟೆಯಾಗಿದೆ. 2019 ರ ಚುನಾವಣೆಯಲ್ಲಿ ಆರ್.ಕೆ.ಸಿಂಗ್ ಮೂಲಕ ಕೇಸರಿ ಪಕ್ಷವು ಈ ಸ್ಥಾನವನ್ನು ಗೆದ್ದಿತ್ತು.

ಸಿಂಗ್ ಅವರು ಅಸನ್ಸೋಲ್ ಟಿಕೆಟ್ ನಿರಾಕರಿಸಲು ಮತ್ತೊಂದು ಕಾರಣವೆಂದರೆ ಬಿಹಾರ ಮೂಲದ ಮತ್ತು ಈ ಹಿಂದೆ ಬಿಜೆಪಿ ಸಂಸದರಾಗಿದ್ದ ಶತ್ರುಘ್ನ ಸಿನ್ಹಾ. ಹಿರಿಯ ನಟ ಸಿನ್ಹಾ ಅವರು ಪವನ್ ಸಿಂಗ್ ಅವರಿಗೆ ಮನರಂಜನಾ ಉದ್ಯಮದಲ್ಲಿ ತಂದೆಯಂತೆ ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಪವನ್​ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಿಂಗ್ ಅವರಿಗೆ ಸಹಾಯ ಮಾಡಿದ್ದರು.

ಅಸನ್ಸೋಲ್​ನಿಂದ ಬಿಜೆಪಿ ಟಿಕೆಟ್ ನಿರಾಕರಿಸುವುದು ಸೂಕ್ತವೆಂದು ಪವನ್ ಸಿಂಗ್ ಭಾವಿಸಿದ್ದಾರೆ. ಈಗ, ಬಿಜೆಪಿ ಸಿಂಗ್ ಅವರನ್ನು ಬೇರೆ ಯಾವುದೇ ಸ್ಥಾನದಿಂದ ಕಣಕ್ಕಿಳಿಸುತ್ತದೆಯೇ ಅಥವಾ ಪಟ್ಟಿಯಿಂದ ಕೈಬಿಡುತ್ತದೆಯೇ ಎಂದು ನೋಡಬೇಕಾಗಿದೆ.

ಇದನ್ನೂ ಓದಿ : BJP Candidates List : ಬಿಜೆಪಿಯ ಈ ನಾಲ್ವರು ವಿವಾದಾತ್ಮಕ ಸಂಸದರಿಗೆ ಈ ಬಾರಿ ಟಿಕೆಟಿಲ್ಲ!

ವಿವಾದವಾಗಿತ್ತು

38 ವರ್ಷದ ಭೋಜಪುರಿ ಗಾಯಕನಿಗೆ ಟಿಕೆಟ್ ನೀಡಿರುವುದು ಭಾರಿ ವಿವಾದವನ್ನು ಹುಟ್ಟುಹಾಕಿತು. ಅವರ ಸಂಗೀತದಲ್ಲಿ ಬಂಗಾಳಿ ಮಹಿಳೆಯರ ಬಗ್ಗೆ ಅನುಚಿತ ಉಲ್ಲೇಖಗಳಿವೆ ಎಂಬ ಆರೋಪಗಳನ್ನು ಮುನ್ನೆಲೆಗೆ ತರಲಾಗಿದೆ.

ಏತನ್ಮಧ್ಯೆ, ಜಾರ್ಖಂಡ್​ನ ಹಜಾರಿಬಾಗ್ ಜಯಂತ್ ಸಿನ್ಹಾ ಮತ್ತು ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ನಂತರ ಮುಂಬರುವ ಲೋಕಸಭಾ ಚುನಾವಣೆಯಿಂದ ಹೊರಗುಳಿದ ಮೂರನೇ ಬಿಜೆಪಿ ನಾಯಕ ಪವನ್ ಸಿಂಗ್.

Exit mobile version