ಬೆಂಗಳೂರು: ಬೆಂಗಳೂರು ಮೆಟ್ರೊಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (BMTC) ಬಹು ನಿರೀಕ್ಷಿತ ನಿಮ್ಮಬಸ್ (NIMMBUS) ಆ್ಯಪ್ ಅನ್ನು ಮುಂದಿನ ವಾರ ಬಿಡುಗಡೆಗೊಳಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ಅಧಿಕಾರಿ ಸೂರ್ಯ ಸೇನ್ ಅವರು, ಆ್ಯಪ್‌ನ ಟೆಸ್ಟಿಂಗ್ ನಡೆಯುತ್ತಿದೆ ಎಂದಿದ್ದಾರೆ.
ಆ್ಯಪ್ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 8ರಂದು ಬಿಡುಗೆಯಾಗಬೇಕಿತ್ತು. ಆದರೆ ಚುನಾವಣಾ ಆಯೋಗದ ಅಧಿಕಾರಿಗಳ ಭೇಟಿಯ ಪರಿಣಾಮ ಮುಂದೂಡಿಕೆಯಾಗಿದೆ ಎಂದು ಸೇನ್ ಅವರು ತಿಳಿಸಿದ್ದಾರೆ. ಈ NIMMBUS ಆ್ಯಪ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಹೀಗಿದ್ದರೂ, ದಿನಾಂಕ ಇನ್ನೂ ಅಂತಿಮವಾಗಿಲ್ಲ. ಎರಡು-ಮೂರು ತಿಂಗಳುಗಳಲ್ಲಿಯೇ 5 ಸಾವಿರ ಬಸ್‌ಗಳಲ್ಲಿ ಡಿವೈಸ್‌ಗಳನ್ನು (ಟ್ರ್ಯಾಕರ್) ಅಳವಡಿಸಲಾಗಿದೆ ಎಂದರು.
ಈ ಆ್ಯಪ್ 2022ರ ಡಿಸೆಂಬರ್‌ಬನಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಬಳಿಕ ಈ ವರ್ಷ ಜನವರಿಗೆ ಮುಂದೂಡಿಕೆಯಾಯಿತು. ಆದರೆ ತಾಂತ್ರಿಕ ಅಡಚಣೆಗಳಿಂದ ಮುಂದೂಡಿಕೆಯಾಗಿತ್ತು.
NIMMBUS ಆ್ಯಪ್ ಪ್ರಯೋಜನವೇನು?
NIMMBUS ಆ್ಯಪ್ ಗ್ರಾಹಕ ಸ್ನೇಹಿಯಾಗಿದ್ದು, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳ ರಿಯಲ್ ಟೈಮ್ ಟ್ರ್ಯಾಕಿಂಗ್‌ಗೆ ಸಹಕಾರಿಯಾಗಲಿದೆ. ಅಂದರೆ ಬಸ್ ಯಾವ ಮಾರ್ಗದಲ್ಲಿ ಎಲ್ಲಿ ಸಂಚರಿಸುತ್ತಿದೆ ಎಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಲಿದೆ. ಪ್ರಯಾಣಿಕರು ಸೈನಿಂಗ್ ಅಪ್ ಮೂಲಕ ಆ್ಯಪ್ ಅನ್ನು ಬಳಸಬಹುದು.
ಲೈವ್ ಟ್ರ್ಯಾಕಿಂಗ್ ಜತೆಗೆ SOS ಫೀಚರ್ ಅನ್ನು ಕೂಡ ಒಳಗೊಂಡಿದೆ. ತುರ್ತು ಪರಿಸ್ಥಿತಿಗಳಲ್ಲಿ ಬಿಎಂಟಿಸಿ ಹೆಲ್ಪ್‌ಲೈನ್‌ಗೆ ಸುಲಭವಾಗಿ ಕನೆಕ್ಟ್ ಆಗಬಹುದು. ಬಿಎಂಟಿಸಿಯ ಸಮೀಪದ ಬಸ್ ನಿಲ್ದಾಣದ ಮಾಹಿತಿ ಇದರಲ್ಲಿ ಸಿಗಲಿದೆ. ಸಮೀಪದ ಮೆಟ್ರೊ ನಿಲ್ದಾಣದ ಮಾಹಿತಿಯೂ ಸಿಗಲಿದೆ. ಕೆಎಸ್‌ಆರ್‌ಟಿಸಿಯ ಬಸ್ ಸ್ಟಾಪ್ ವಿವರವೂ ಶೀಘ್ರ ಸಿಗಲಿದೆ. ಬಸ್ ಟಿಕೆಟ್ ದರ ಮತ್ತು ಪಾಸ್ ವಿವರ ಕೂಡ ಲಭ್ಯ.