ಗಾಂಧಿನಗರ: ಗುಜರಾತ್ನ ಮೊರ್ಬಿ ಜಿಲ್ಲೆಯಲ್ಲಿ ತೂಗುಸೇತುವೆಯೊಂದು ಕುಸಿದಿದ್ದು (Morbi Bridge Collapse), ನೂರಾರು ಜನ ನದಿಗೆ ಬಿದ್ದಿದ್ದಾರೆ. ಸೇತುವೆ ಮೇಲೆ 500ಕ್ಕೂ ಹೆಚ್ಚು ಪ್ರವಾಸಿಗರು ಇದ್ದಾಗಲೇ ಕುಸಿದ ಕಾರಣ ನೂರಾರು ಜನ ನದಿಗೆ ಬಿದ್ದಿದ್ದಾರೆ. ನೂರಾರು ಮಂದಿಯ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ದುರಂತದಲ್ಲಿ ಹತ್ತಾರು 100ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, 10 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾಗೆಯೇ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಐದು ದಿನಗಳ ಹಿಂದಷ್ಟೇ ದುರಸ್ತಿ
ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ದುರಸ್ತಿಪಡಿಸಲಾಗಿದ್ದು, ಐದು ದಿನಗಳ ಹಿಂದಷ್ಟೇ ಪ್ರವಾಸಿಗರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಸೇತುವೆಯನ್ನು ದುರಸ್ತಿಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಸೇತುವೆ ಕುಸಿತವಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮುಖ್ಯಮಂತ್ರಿಗೆ ಮೋದಿ ಕರೆ
ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿದ್ದು, ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಕ್ಷಿಪ್ರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಹಾಗೆಯೇ, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ (PMO) ತಿಳಿಸಿದೆ. ಹಾಗೆಯೇ, ಪ್ರಧಾನಿ ಅವರು ಪರಿಹಾರವನ್ನೂ ಘೋಷಿಸಿದ್ದಾರೆ.
ಇದನ್ನೂ ಓದಿ | ಕರ್ನಾಟಕ ಪಬ್ಲಿಕ್ ಶಾಲೆ ಸೀಲಿಂಗ್ ಕುಸಿತ; ಇಬ್ಬರು ಮಕ್ಕಳ ತಲೆಗೆ ಗಾಯ