Site icon Vistara News

ಲೋಕಸಭೆ ಚುನಾವಣೆ ನಂತರವೇ ಜನಗಣತಿ; ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಸೇರಿ ಜನರಿಗೆ ಕೇಳುವ ಪ್ರಶ್ನೆ ಯಾವವು?

Census To Be Conducted After Lok Sabha Election

Census most likely after Lok Sabha elections 2024, here’s what you will be asked

ನವದೆಹಲಿ: ದೇಶದಲ್ಲಿ 10 ವರ್ಷಕ್ಕೊಮ್ಮೆ ನಡೆಸಲಾಗುವ ಜನಗಣತಿಯನ್ನು ಕೊರೊನಾ ಬಿಕ್ಕಟ್ಟಿನಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೂ, ಲೋಕಸಭೆ ಚುನಾವಣೆಗೂ ಮೊದಲು ಜನಗಣತಿ ಮಾಡಲಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಲೋಕಸಭೆ ಚುನಾವಣೆಯ ನಂತರವೇ ಜನಗಣತಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ, ಜನರಿಂದ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಕಾರು, ಬೈಕ್‌ ಸೇರಿ ಸುಮಾರು 31 ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದೂ ಮಾಹಿತಿ ನೀಡಿದ್ದಾರೆ.

2024ರ ಏಪ್ರಿಲ್‌-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಇರುವುದರಿಂದ ಚುನಾವಣೆಗೂ ಮೊದಲೇ ಜನಗಣತಿ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ, ಲೋಕಸಭೆ ಚುನಾವಣೆ ಮುಗಿದ ಮೂರು ತಿಂಗಳ ನಂತರ ಅಂದರೆ, ಸೆಪ್ಟೆಂಬರ್‌ 30ರ ಬಳಿಕ ಜನಗಣತಿ ಪ್ರಕ್ರಿಯೆ ಆರಂಭವಾಗಬಹುದು ಎಂದು ತಿಳಿದುಬಂದಿದೆ.

ಜನರಿಗೆ 31 ಪ್ರಶ್ನೆ

ಜನಗಣತಿ ವೇಳೆ ಇದುವರೆಗೆ ಹೆಸರು, ಕುಟುಂಬಸ್ಥರ ವಿವರ ಸೇರಿ ಕೆಲವು ಮಾಹಿತಿಯನ್ನಷ್ಟೇ ಪಡೆಯಲಾಗುತ್ತಿತ್ತು. ಆದರೆ, ಈ ಬಾರಿಯ ಜನಗಣತಿಯಲ್ಲಿ ಜನರಿಗೆ 31 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಇಷ್ಟೂ ಪ್ರಶ್ನೆಗಳಿಗೆ ಜನ ಉತ್ತರಿಸಬೇಕಾಗುತ್ತದೆ. ಸ್ಮಾರ್ಟ್‌ಫೋನ್‌, ಇಂಟರ್‌ನೆಟ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಕಾರು, ಬೈಕ್‌ ಸೇರಿ ಒಟ್ಟು 31 ಪ್ರಶ್ನೆಗಳಿಗೆ ನಾಗರಿಕರು ಉತ್ತರಿಸಬೇಕಾಗುತ್ತದೆ. ಒಂದಿಡೀ ಕುಟುಂಬದ ಸಮಗ್ರ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡು ಹೋಗಲಿದ್ದಾರೆ.

ವಿಳಂಬ ಏಕೆ?

ಲೋಕಸಭೆ ಚುನಾವಣೆ ನಡೆಸಲು ಲಕ್ಷಾಂತರ ಸಿಬ್ಬಂದಿಯ ಅವಶ್ಯಕತೆ ಇರುತ್ತದೆ. ಅದರಲ್ಲೂ, ಚುನಾವಣೆ ಪ್ರಕ್ರಿಯೆಯು ದೀರ್ಘವಾಗಿ ನಡೆಯಲಿದೆ. ಇನ್ನು, ಜನಗಣತಿಯೂ ಸುದೀರ್ಘ ಪ್ರಕ್ರಿಯೆಯಾಗಿದೆ. ಶಿಕ್ಷಕರು ಸೇರಿ ದೇಶದ 30 ಲಕ್ಷ ಸರ್ಕಾರಿ ನೌಕರರಿಗೆ ತರಬೇತಿ ನೀಡಬೇಕಾಗುತ್ತದೆ. ತರಬೇತಿ ನೀಡಲು ಎರಡು-ಮೂರು ತಿಂಗಳು ಬೇಕಾಗುತ್ತದೆ. ಹಾಗಾಗಿ, ಲೋಕಸಭೆ ಚುನಾವಣೆ ಮತ್ತು ಜನಗಣತಿಯನ್ನು ಕೆಲವೇ ತಿಂಗಳ ಅಂತರದಲ್ಲಿ ಮುಗಿಸಲು ಕಷ್ಟವಾಗುತ್ತದೆ. ಇದರಿಂದಾಗಿಯೇ, ಲೋಕಸಭೆ ಚುನಾವಣೆ ಮುಗಿದ ಬಳಿಕವೇ ಜನಗಣತಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Caste census: ಜಾತಿ ಜನಗಣತಿ ಕೂಡಲೇ ನಿಲ್ಲಿಸಿ; ಬಿಹಾರ ಸರ್ಕಾರಕ್ಕೆ ಹೈಕೋರ್ಟ್​​ನಿಂದ ಆದೇಶ

ಕೊರೊನಾದಿಂದಾಗಿ ಜನಗಣತಿ ಮಾತ್ರವಲ್ಲ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ (NPR) ಪ್ರಕ್ರಿಯೆಯೂ ಬಾಕಿ ಉಳಿದಿದೆ. ವಿರೋಧದ ಮಧ್ಯೆಯೂ ಕೇಂದ್ರ ಸರ್ಕಾರವು 2020ರ ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 30 ಅವಧಿಯಲ್ಲಿ ಎನ್‌ಪಿಆರ್‌ ಮುಗಿಸಬೇಕಿತ್ತು. ಆದರೆ, ದೇಶಾದ್ಯಂತ ಕೊರೊನಾ ಪಸರಿಸಿದ ಕಾರಣ ಇದನ್ನೂ ಮುಂದೂಡಲಾಗಿದೆ.

Exit mobile version